ಕೇಸಿನಲ್ಲಿ ರಿಲೀಫ್ ನೀಡಲು ನಿರಾಕರಿಸಿದ ನ್ಯಾಯಾಲಯ
ನವದೆಹಲಿ: ಬಾಲಿವುಡ್‌ನ ಹಾಸ್ಯ ನಟ ರಾಜ್‌ಪಾಲ್ ಯಾದವ್ ಚೆಕ್ ಬೌನ್ಸ್ ಪ್ರಕರಣವೊಂದಕ್ಕೆ ಸಂಬಂಧಿಸಿ ಜೈಲುಪಾಲಾಗಿದ್ದಾರೆ. ಪ್ರಕರಣದಲ್ಲಿ ಅವರಿಗೆ ರಿಲೀಫ್ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿತ್ತು. ಈ ಕಾರಣದಿಂದ ಅವರು ತಿಹಾರ್ ಜೈಲಿನ ಅಧಿಕಾರಿಗಳ ಎದುರು ಶರಣಾಗಿದ್ದಾರೆ. ಗುರುವಾರ ಸಂಜೆ ನಾಲ್ಕು ಗಂಟೆಗೆ ಅವರು ಜೈಲಿಗೆ ಹೋಗಿದ್ದು, ಅಧಿಕಾರಿಗಳು ಆ ಬಳಿಕ ತಮ್ಮ ಪ್ರಕ್ರಿಯೆ ನಡೆಸಿದ್ದಾರೆ. ಅವರನ್ನು ಈಗ ಜೈಲಿನಲ್ಲಿ ಇಡಲಾಗಿದೆ.
ಮುರಳಿ ಪ್ರಾಜೆಕ್ಟ್ಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆ ರಾಜ್‌ಪಾಲ್ ವಿರುದ್ಧ ಕೇಸ್ ದಾಖಲಿಸಿತ್ತು. ನಟ ಹಾಗೂ ಅವರ ಪತ್ನಿ ಕೊಟ್ಟ ಚೆಕ್ ಬೌನ್ಸ್ ಆಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ. 2018ರಲ್ಲಿ ಮ್ಯಾಜಿಸ್ಟ್ರೇಟ್ ಕೋರ್ಟ್ ಈ ಚೆಕ್ ಬೌನ್ಸ್ ಪ್ರಕರಣದಲ್ಲಿ ರಾಜ್‌ಪಾಲ್ ಯಾದವ್ ಹಾಗೂ ಆತನ ಪತ್ನಿ ಅಪರಾಧಿ ಎಂದು ಘೋಷಣೆ ಮಾಡಿತ್ತು. 2019ರಲ್ಲಿ ಸೆಷನ್ ಕೋರ್ಟ್ ಈ ಆದೇಶವನ್ನು ಎತ್ತಿ ಹಿಡಿಯಿತು.
2019ರಲ್ಲಿ ಈ ಪ್ರಕರಣವನ್ನು ದೆಹಲಿ ಕೋರ್ಟ್‌ನಲ್ಲಿ ರಾಜ್‌ಪಾಲ್ ಯಾದವ್ ಪ್ರಶ್ನೆ ಮಾಡಿದರು. ಸೆಟಲ್ಮೆಂಟ್ಗೆ ದಾರಿ ಹುಡುಕುತ್ತಿದ್ದೇವೆ ಎಂದು ಹೇಳಿದ ಕಾರಣದಿಂದ 2024ರಲ್ಲಿ ಹೈಕೋರ್ಟ್ ನಟನಿಗೆ ತಾತ್ಕಾಲಿಕ ರಿಲೀಫ್ ನೀಡಿತ್ತು. ಆದರೆ, ಈವರೆಗೆ ನಟ ಹಣವನ್ನು ಹಿಂದಿರುಗಿಸಿಲ್ಲ. ಹೀಗಾಗಿ, ಕೋರ್ಟ್ ಈ ಬಗ್ಗೆ ಆದೇಶ ಹೊರಡಿಸಿದೆ. ಹೆಚ್ಚುವರಿಯಾಗಿ ಕೆಲ ವಾರ ಅವಕಾಶ ಕೊಟ್ಟರೆ ಹಣ ಹೊಂದಿಸಲು ಪ್ರಯತ್ನಿಸುವುದಾಗಿ ರಾಜ್‌ಪಾಲ್ ಪರ ವಕೀಲರು ಹೇಳಿದ್ದರು. ಆದರೆ, ಇದಕ್ಕೆ ಹೈಕೋರ್ಟ್ ನಿರಾಕರಿಸಿತ್ತು. ಬುಧವಾರ ನಾಲ್ಕು ಗಂಟೆ ಒಳಗೆ ಸರೆಂಡರ್ ಆಗಲು ಕೋರ್ಟ್ ಸೂಚನೆ ನೀಡಿತ್ತು.
ಯಾವುದೇ ವ್ಯಕ್ತಿ ನಿರ್ದಿಷ್ಟ ಹಿನ್ನೆಲೆ ಅಥವಾ ಉದ್ಯಮಕ್ಕೆ ಸೇರಿದವನು ಎಂಬ ಕಾರಣಕ್ಕಾಗಿ ಈ ನ್ಯಾಯಾಲಯವು ಅವರಿಗೆ ವಿಶೇಷ ಅವಕಾಶ ನೀಡುತ್ತದೆ ಎಂದು ನಿರೀಕ್ಷಿಸಬೇಡಿ. ನಿರಂತರವಾಗಿ ಅದೇ ತಪ್ಪು ಆಗುತ್ತಿದ್ದರೆ ಅದನ್ನು ಒಪ್ಪಲು ಸಾಧ್ಯವಿಲ್ಲ ಎಂದು ನ್ಯಾಯಾಲಯ ಹೇಳಿದೆ.
























