ನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಲೋಕಸಭೆಯಲ್ಲಿ ಮಾತನಾಡುವುದಕ್ಕೆ ತಡೆ ಒಡ್ಡಲಾಗುತ್ತಿದೆ ಎಂದು ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆ ಆರೋಪಿಸಿದ್ದು, ಈ ವಿಷಯ ಮೇಲ್ಮನೆಯಲ್ಲಿ ಕೋಲಾಹಲ ಸೃಷ್ಟಿಸಿತು.
ರಾಹುಲ್ ಗಾಂಧಿಗೆ ನರವಣೆ ಅವರ ಪುಸ್ತಕ ಉಲ್ಲೇಖಿಸಲು ಬಿಡುತ್ತಿಲ್ಲ. ಚೀನಾ ವಿಚಾರ ಎತ್ತಿದರೆ ಕೇಂದ್ರ ಸರ್ಕಾರಕ್ಕೆ ತುರಿಸುತ್ತದೆ ಎಂದರು. ಇದಕ್ಕೆ ಸಭಾಪತಿ ಸಿ. ಪಿ. ರಾಧಾಕೃಷ್ಣನ್ ವಿರೋಧ ವ್ಯಕ್ತಪಡಿಸಿದ್ದು, ಲೋಕಸಭೆಯ ಸಂಗತಿಗಳನ್ನು ರಾಜ್ಯಸಭೆಯಲ್ಲಿ ಪ್ರಸ್ತಾಪ ಮಾಡುವುದು ನಿಯಮ ಬಾಹಿರ ಎಂದು ಹೇಳಿದರು.
ಹೀಗಿದ್ದರೂ ಮಾತು ಮುಂದುವರಿಸಿದ ಖರ್ಗೆ, ಸಂಸತ್ತು ಎಂದರೆ ಲೋಕಸಭೆ ಮತ್ತು ರಾಜ್ಯಸಭೆ ಎರಡೂ ಸೇರಿವೆ. ರಾಹುಲ್ ಗಾಂಧಿ ದೇಶದ ಹಿತದೃಷ್ಟಿಯಿಂದ ಮಾತನಾಡಲು ಬಯಸಿದರೆ ಅವರಿಗೆ ಅವಕಾಶ ನೀಡುತ್ತಿಲ್ಲ. ನಿಮ್ಮ ತಪ್ಪುಗಳನ್ನು ಮುಚ್ಚಿಡಲು ಸಂಸತ್ತಿನ ಒಂದು ಸ್ತಂಭವನ್ನು ನಾಶ ಮಾಡಿದ್ದೀರಿ ಎಂದು ಕುಟುಕಿದರು.
ಖರ್ಗೆ ಮಾತಿಗೆ ತೀವ್ರ ವಿರೋಧ ವ್ಯಕ್ತಪಡಿಸಿದ ಜೆ.ಪಿ. ನಡ್ಡಾ ಮತ್ತು ಕಿರಣ್ ರಿಜಿಜು, ಲೋಕಸಭೆಯ ನಡಾವಳಿಗಳನ್ನು ರಾಜ್ಯಸಭೆಯಲ್ಲಿ ಚರ್ಚಿಸುವುದು ನಿಯಮಬಾಹಿರ ಎಂದರು. ನಿಮ್ಮ ಪಕ್ಷವನ್ನು ಒಬ್ಬ ಅಪ್ರಾಪ್ತ ಮಗುವಿನ ಒತ್ತೆಯಾಳನ್ನಾಗಿ ಮಾಡಬೇಡಿ ಎಂದು ನಡ್ಡಾ ತಿರುಗೇಟು ನೀಡಿದರು. ಇದರಿಂದ ಕುಪಿತರಾದ ಕಾಂಗ್ರೆಸ್ ಸದಸ್ಯರು, ಪ್ರಜಾಪ್ರಭುತ್ವದ ಹತ್ಯೆ ಎಂದು ಆರೋಪಿಸಿ ಸದನದಿಂದ ಹೊರನಡೆದರು. ಈ ಮಧ್ಯೆ ಸಚಿವೆ ನಿರ್ಮಲಾ ಸೀತಾರಾಮನ್ ಸಹ ಕಾಂಗ್ರೆಸ್ ಆಡಳಿತದ ಹಳೆಯ ಘಟನೆಗಳನ್ನು ನೆನಪಿಸಿ ವಾಗ್ದಾಳಿ ನಡೆಸಿದರು.
























