ಬೆಳಗಾವಿ: ಹಿಡನ್ ಕೆನರಾ ಬಳಸಿ ಮಹಿಳಾ ಅಧಿಕಾರಿಯೊಬ್ಬರ ಖಾಸಗಿ ಕ್ಷಣಗಳನ್ನು ರೆಕಾರ್ಡ್ ಮಾಡಿಕೊಂಡು, ಸಾಮಾಜಿಕ ಜಾಲತಾಣ, ಮಾಧ್ಯಮಗಳಲ್ಲಿ ವೈರಲ್ ಮಾಡುವುದಾಗಿ ಬೆದರಿಸಿ, 50 ಲಕ್ಷ ರೂ. ಗಳಿಗೆ ಬೇಡಿಕೆ ಇಟ್ಟ ಮೂವರು ನಕಲಿ ಪತ್ರಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳನ್ನು ಸಮೀರ್ ನಿಸಾರ್ ಅಹ್ಮದ್ ಶೇಖ್, ಅಬ್ದುಲ್ ರಶೀದ್ ಮಕಾನದಾರ, ಮೊಹಮ್ಮದ್ ಬಾಳೇಕುಂದ್ರಿ ಎಂದು ಗುರುತಿಸಲಾಗಿದೆ. ಇವರು ಅಧಿಕಾರಿಯ ಮನೆಯ ಕೊಠಡಿಯಲ್ಲಿ ಹಿಡನ್ ಕೆನರಾ ಇರಿಸಿ ಖಾಸಗಿ ಕ್ಷಣಗಳನ್ನು ವಿಡಿಯೋ ರೆಕಾರ್ಡ್ ಮಾಡಿದ್ದರು. ಆ ಬಳಿಕ ಆ ಅಧಿಕಾರಿಗೆ 1 ಕೋಟಿ ರೂ. ಗಳಿಗೆ ಬೇಡಿಕೆ ಇಟ್ಟಿದ್ದರು. ಕೊನೆಗೆ 50 ಲಕ್ಷ ರೂ. ಕೊಡುವಂತೆ ಪೀಡಿಸುತ್ತಿದ್ದರು.
ಮಹಿಳಾ ಅಧಿಕಾರಿ ಮಾಳಮಾರುತಿ ಠಾಣಾ ಪೊಲೀಸರಿಗೆ ಈ ಸಂಬಂಧ ದೂರು ನೀಡಿದ್ದು, ನಕಲಿ ಪತ್ರಕರ್ತ ಆರೋಪಿಗಳ ಹೆಡೆಮುರಿಯನ್ನು ಪೊಲೀಸರು ಕಟ್ಟಿದ್ದಾರೆ. ಪೊಲೀಸ್ ದೂರು ನೀಡದಂತೆಯೂ ಆರೋಪಿಗಳು ಅಧಿಕಾರಿಗೆ ಸಾಕಷ್ಟು ಒತ್ತಡ ಹೇರಿದ್ದರು. ಅದನ್ನು ಗಣನೆಗೆ ತೆಗೆದುಕೊಳ್ಳದೆ ಅಧಿಕಾರಿ ಪೊಲೀಸ್ ದೂರು ನೀಡುವ ಮೂಲಕ ಮಾದರಿಯಾಗಿದ್ದಾರೆ.
ಈ ಕಳ್ಳರ ಜಾಲ ದೊಡ್ಡ ಮಟ್ಟದಲ್ಲಿರುವ ಶಂಕೆ ವ್ಯಕ್ತಪಡಿಸಿರುವ ಪೊಲೀಸರು, ತನಿಖೆ ಆರಂಭಿಸಿದ್ದಾರೆ.
























