ಪುತ್ತೂರು: ಖಾಸಗಿ ವ್ಯಕ್ತಿಯೆಬ್ಬರು ಸುಮಾರು 25 ವರ್ಷಗಳಿಂದ ಸಾರ್ವಜನಿಕವಾಗಿ ಬಳಕೆ ಮಾಡುತ್ತಿದ್ದ ರಸ್ತೆಯನ್ನೇ ಮುಚ್ಚಿದ್ದು, ಇದರಿಂದಾಗಿ ಎಂಡೋಸಲ್ಫಾನ್ ಪೀಡಿತ ಬಾಲಕನೊಬ್ಬ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋಗುವುದಕ್ಕೂ ಪರದಾಡಬೇಕಾದ ಸ್ಥಿತಿ ಕೊಡಿಪ್ಪಾಡಿಯ ಬಾಯಂಬೆಯಲ್ಲಿ ನಿರ್ಮಾಣವಾಗಿದೆ.
ವ್ಯಕ್ತಿಯೊಬ್ಬರು ತಮ್ಮ ಜಮೀನನ್ನು ತುಂಡು ಭೂಮಿಯಾಗಿ ಪರಿವರ್ತಿಸಿ ಅನೇಕರಿಗೆ ಮಾರಾಟ ಮಾಡಿದ್ದರು. ಈ ಸಂದರ್ಭದಲ್ಲಿ ರಸ್ತೆಯನ್ನು ದಾಖಲೆಗಳಲ್ಲಿ ಸಾರ್ವಜನಿಕ ರಸ್ತೆ ಎಂಬುದಾಗಿ ತೋರಿಸಲಾಗಿತ್ತು. ಸ್ಥಳೀಯರು ಸಹ ಇದೇ ರಸ್ತೆಯನ್ನು ಕಳೆದ 25 ವರ್ಷಗಳಿಂದ ಬಳಕೆ ಮಾಡುತ್ತಿದ್ದರು. ಆದರೆ ಪ್ರಸ್ತುತ ಕಲ್ಲುಗಳನ್ನು ಕಟ್ಟಿ ಈ ರಸ್ತೆಯನ್ನು ಮುಚ್ಚಲಾಗಿದೆ. ಮಣ್ಣು ತುಂಬಿಸಿ ರಸ್ತೆಯ ಚರಂಡಿಗಳನ್ನು ಮುಚ್ಚಲಾಗಿದೆ.
ಈ ಬೆಳವಣಿಗೆಯಿಂದ ಸ್ಥಳೀಯ ಹರೀಶ್ ಭಟ್ ಎಂಬ ವರ ಪುತ್ರ ಎಂಡೋ ಪೀಡಿತ ಹತ್ತು ವರ್ಷದ ಬಾಲಕ ಶಿವಶಂಕರ್ ಚಿಕಿತ್ಸೆಗೆ ತೆರಳುವುದಕ್ಕೂ ರಸ್ತೆ ವ್ಯವಸ್ಥೆ ಇಲ್ಲದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಸದ್ಯ ಬಾಲಕನನ್ನು ಹೊತ್ತು ಕಿಲೋಮೀಟರ್ಗಟ್ಟಲೆ ನಡೆಯಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಈ ರಸ್ತೆಯು ಕೇವಲ ದಾಖಲೆಯಲ್ಲಷ್ಟೇ ಇಲ್ಲ. ಬದಲಾಗಿ ನಗರ ಸಭೆಯ ವತಿಯಿಂದ ಇಲ್ಲಿ ‘ಬಾಯಂಬೆ ಅಡ್ಡ ರಸ್ತೆ’ ಎಂಬ ನಾಮಫಲಕ ಅಳವಡಿಸಲಾಗಿತ್ತು. ರಸ್ತೆಗೆ ಇಂಟರ್ ಲಾಕ್ ಹಾಕಲಾಗಿದ್ದು. ರಸ್ತೆಯ ಕೆಳಭಾಗದಲ್ಲಿ ನಗರ ಸಭೆಯ ನೀರಿನ ಪೈಪ್ರೈನ್ ಕೂಡ ಹಾದುಹೋಗಿದೆ. ಬೀದಿ ದೀಪಗಳ ವ್ಯವಸ್ಥೆಯೂ ಇಲ್ಲಿದೆ. ಇಷ್ಟೆಲ್ಲಾ ಸರ್ಕಾರಿ ಸೌಲಭ್ಯಗಳಿರುವ ರಸ್ತೆಯನ್ನು ಖಾಸಗಿ ವ್ಯಕ್ತಿಗಳು ಅಕ್ರಮವಾಗಿ ಮುಚ್ಚಿರುವುದು ಕಾನೂನಿನ ಉಲ್ಲಂಘನೆಯಾಗಿದೆ ಎಂದು ಸ್ಥಳೀಯರು ದೂರಿದ್ದಾರೆ.
ಸ್ಥಳೀಯ ನಿವಾಸಿಗಳು ಕಂದಾಯ ಇಲಾಖೆ, ಪೊಲೀಸ್ ಇಲಾಖೆ ಹಾಗೂ ನಗರ ಸಭೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
ಕಂದಾಯ ಇಲಾಖೆ: ಕಂದಾಯ ನಿರೀಕ್ಷಕ ಚಂದ್ರ ನಾಯ್ಕ. ಗ್ರಾಮ ಕರಣಿಕ ಹಕೀಬ್ ಹಾಗೂ ಸಿಬ್ಬಂದಿಗಳು ಸ್ಥಳ ಪರಿಶೀಲನೆ ನಡೆಸಿ, ಸರ್ಕಾರಿ ವ್ಯವಸ್ಥೆಯಲ್ಲಿ ರಸ್ತೆಯಿರುವುದು ಸ್ಪಷ್ಟವಾಗಿ ಕಂಡುಬಂದ ಹಿನ್ನೆಲೆಯಲ್ಲಿ, ರಸ್ತೆ ತೆರವುಗೊಳಿಸಲು ಸೂಚಿಸಿದ್ದಾರೆ. ಇದಕ್ಕೆ ರಸ್ತೆಗೆ ಕಲ್ಲು ಅಡ್ಡವಿಟ್ಟು ಬಂದ್ ಮಾಡಿದ ವ್ಯಕ್ತಿಯೂ ಒಪ್ಪಿ ಜೆಸಿಬಿ ಮೂಲಕ ಕಲ್ಲು ತೆರವುಗೊಳಿಸುವ ಕಾರ್ಯ ನಡೆಸಿದ್ದಾರೆ.
ನಗರ ಸಭೆಯ ಇಂಜಿನಿಯರ್ ಕೃಷ್ಣಮೂರ್ತಿ ರೆಡ್ಡಿ ಅವರ ತಂಡವು ಭೇಟಿ ನೀಡಿ, ನಗರ ಸಭೆಯ ಆಸ್ತಿಯನ್ನು ಉಳಿಸಲು ಮತ್ತು ಸಾರ್ವಜನಿಕರಿಗೆ ದಾರಿ ಮಾಡಿಕೊಡಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದೆ.
























