ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಭಾರತದ ಜೊತೆ ಆಡುವುದಿಲ್ಲ : ಪಾಕಿಸ್ತಾನ ಅಧಿಕೃತ ಘೋಷಣೆ

ಬಾಂಗ್ಲಾದೇಶವನ್ನು ಬೆಂಬಲಿಸುವ ಸಲುವಾಗಿ ಭಾರತದ ಜೊತೆ ಆಡದಿರಲು ನಿರ್ಧಾರ

ಇಸ್ಲಾಮಾಬಾದ್‌ : ಮುಂಬರುವ ಶನಿವಾರದಿಂದ ಪ್ರಾರಂಭವಾಗಲಿರುವ 2026ರ ಐಸಿಸಿ ಪುರುಷರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧದ ಪಂದ್ಯವನ್ನು ಪಾಕಿಸ್ತಾನ ಬಹಿಷ್ಕರಿಸಲಿದೆ ಎಂದು ಪಾಕ್ ಪ್ರಧಾನಿ ಶೆಹಬಾಝ್ ಷರೀಫ್ ಅಧಿಕೃತವಾಗಿ ಘೋಷಿಸಿದ್ದಾರೆ. ಇದರೊಂದಿಗೆ ಫೆಬ್ರವರಿ 15ರಂದು ಭಾರತ–ಪಾಕ್ ನಡುವಿನ ಕ್ರಿಕೆಟ್ ಪಂದ್ಯ ನಡೆಯುವುದಿಲ್ಲ ಎಂಬುದು ಖಚಿತವಾಗಿದೆ.

ಪಾಕಿಸ್ತಾನದ ಸಂಸತ್ತಿನ ಕ್ಯಾಬಿನೆಟ್ ಸಭೆಯಲ್ಲಿ ಮಾತನಾಡಿದ ಶೆಹಬಾಝ್ ಷರೀಫ್, ಈ ನಿರ್ಧಾರದ ಹಿಂದಿನ ಪ್ರಮುಖ ಕಾರಣಗಳನ್ನು ಸ್ಪಷ್ಟಪಡಿಸಿದ್ದಾರೆ.
ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸಲು ಮುಖ್ಯ ಕಾರಣ ಬಾಂಗ್ಲಾದೇಶಕ್ಕೆ ಬೆಂಬಲ ನೀಡುವುದು. ಅಂದರೆ ಐಸಿಸಿ ಟೂರ್ನಿಯಿಂದ ಬಾಂಗ್ಲಾದೇಶ ತಂಡವನ್ನು ಹೊರಗಿಟ್ಟಿರುವ ಕ್ರಮವನ್ನು ಖಂಡಿಸಿ ಪಾಕಿಸ್ತಾನ ಈ ನಿರ್ಧಾರ ತೆಗೆದುಕೊಂಡಿದೆ ಎಂದು ತಿಳಿಸಿದ್ದಾರೆ.





















































 
 

ಬಾಂಗ್ಲಾದೇಶ ತಂಡವನ್ನು ಟಿ20 ವಿಶ್ವಕಪ್​ನಿಂದ ಹೊರಗಿಡಬಾರದು, ಅವರಿಗೆ ತಟಸ್ಥ ಸ್ಥಳದಲ್ಲಿ ಪಂದ್ಯವಾಡಲು ಅವಕಾಶ ನೀಡಬೇಕೆಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಆಗ್ರಹಿಸಿತ್ತು. ಆದರೆ ಐಸಿಸಿ ಅವಕಾಶ ಇದಕ್ಕೆ ನೀಡಿರಲಿಲ್ಲ. ಇದೀಗ ಬಾಂಗ್ಲಾದೇಶ ನಿಲುವಿಗೆ ಬೆಂಬಲ ಸೂಚಿಸಲು ಪಾಕಿಸ್ತಾನ ಭಾರತದ ಜೊತೆ ಆಡದಿರುವ ಈ ನಿರ್ಧಾರ ಕೈಗೊಂಡಿದೆ.

ಟಿ20 ವಿಶ್ವಕಪ್ ಬಗ್ಗೆ ನಾವು ಸ್ಪಷ್ಟವಾದ ನಿಲುವನ್ನು ತೆಗೆದುಕೊಂಡಿದ್ದೇವೆ. ಭಾರತದ ವಿರುದ್ಧ ಪಂದ್ಯವನ್ನು ಆಡುವುದಿಲ್ಲ. ಏಕೆಂದರೆ ಇದು ಕ್ರೀಡಾ ಕ್ಷೇತ್ರ, ರಾಜಕೀಯವಲ್ಲ. ಕ್ರೀಡಾ ಕ್ಷೇತ್ರದಲ್ಲಿ ಯಾವುದೇ ರಾಜಕೀಯ ಇರಬಾರದು. ನಾವು ಬಹಳ ಸ್ಪಷ್ಟ ನಿಲುವನ್ನು ತೆಗೆದುಕೊಂಡಿದ್ದೇವೆ. ಅಲ್ಲದೆ ನಾವು ಬಾಂಗ್ಲಾದೇಶದ ಪರವಾಗಿ ನಿಲ್ಲಬೇಕು. ಇದು ತುಂಬಾ ಸೂಕ್ತವಾದ ನಿರ್ಧಾರ ಎಂದು ನಾನು ಭಾವಿಸುತ್ತೇನೆ ಎಂದು ಬುಧವಾರ ಪಾಕಿಸ್ತಾನದಲ್ಲಿ ನಡೆದ ಸಂಪುಟ ಸಭೆಯಲ್ಲಿ ಶೆಹಬಾಝ್ ಹೇಳಿದ್ದಾರೆ.

ಪಾಕಿಸ್ತಾನ ಕ್ರಿಕೆಟ್ ಮಂಡಳಿ ಭಾರತದ ವಿರುದ್ಧದ ಪಂದ್ಯವನ್ನು ಬಹಿಷ್ಕರಿಸುವ ಕುರಿತು ಯಾವುದೇ ಔಪಚಾರಿಕ ಮೇಲ್ ಕಳುಹಿಸಿಲ್ಲ. ಆದರೆ ಇದೀಗ ಪಾಕಿಸ್ತಾನ ಪ್ರಧಾನಿಯೇ ಪಂದ್ಯವನ್ನು ಬಹಿಷ್ಕರಿಸುವುದನ್ನು ಘೋಷಿಸಿದ್ದಾರೆ. ಹೀಗಾಗಿ ಭಾರತ ಮತ್ತು ಪಾಕಿಸ್ತಾನ್ ನಡುವಣ ಟಿ20 ವಿಶ್ವಕಪ್ ಪಂದ್ಯ ಜರುಗುವುದಿಲ್ಲ ಎಂಬುದು ದೃಢಪಟ್ಟಿದೆ.

ಪಾಕಿಸ್ತಾನ ತಂಡ ಪಂದ್ಯಕ್ಕೆ ಹಾಜರಾಗದಿದ್ದರೆ, ಭಾರತಕ್ಕೆ 2 ಅಂಕಗಳನ್ನು ನೀಡಲಾಗುತ್ತದೆ. ಈ ಆಯ್ದ ಭಾಗವಹಿಸುವಿಕೆ ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿದೆ ಎಂದು ಅಂತರಾಷ್ಟ್ರೀಯ ಕ್ರಿಕೆಟ್ ಮಂಡಳಿ ಅಸಮಾಧಾನ ವ್ಯಕ್ತಪಡಿಸಿದೆ. ಹೀಗಾಗಿ ಪಾಕಿಸ್ತಾನ ಕ್ರಿಕೆಟ್ ಮಂಡಳಿಗೆ ಆರ್ಥಿಕ ದಂಡ ವಿಧಿಸುವ ಸಾಧ್ಯತೆಯಿದೆ.

error: Content is protected !!
Scroll to Top