ಆರೋಪಿಗಳ ಕುರಿತು ಊಹಾಪೋಹ ಹರಡದಂತೆ ಎಚ್ಚರಿಕೆ ನೀಡಿದ ಎಸ್ಪಿ
ಬೆಳ್ತಂಗಡಿ: ಇಲ್ಲಿನ ಕಳಿಯದಲ್ಲಿ ನಡೆದ ಶಾಲಾ ಬಾಲಕ ಸುಮಂತ್ ಕೊಲೆ ಪ್ರಕರಣದ ಬಗ್ಗೆ ನಡೆದ ತನಿಖೆಯಲ್ಲಿ ಈವರೆಗೆ ವಿಧಿವಿಜ್ಞಾನ ಪ್ರಯೋಗಾಲಯಗಳ ವರದಿ ಬಂದಿಲ್ಲ, ಈ ಬಗ್ಗೆ ತನಿಖೆ ನಡೆಯುತ್ತಿದೆ. ಆದರೆ ಕೆಲವರು ಆರೋಪಿಗಳ ಬಗ್ಗೆ ಊಹಾಪೋಹಗಳನ್ನು ಹರಡುವ ಕಾರ್ಯವನ್ನು ಮಾಡುತ್ತಿದ್ದಾರೆ ಇಂತಹ ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡಬಾರದು ಹಾಗೂ ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕೈಗೊಳ್ಳಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಜ.14ರಂದು ಬೆಳ್ತಂಗಡಿ ಪೊಲೀಸ್ ಠಾಣಾ ವ್ಯಾಪ್ತಿಯ ಒಡಿಲ್ನಾಳ ಗ್ರಾಮದ ಸಂಬೋಳ್ಯದಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಹೊರಡಿಸಿದ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದಂತೆ ಮೃತ್ಯುವಿಗೆ ಕಾರಣ ಮುಳುಗು ಆಗಿದೆ. ಆದರೆ ತಲೆಯಲ್ಲಿದ್ದ ಗಾಯದಿಂದ ಸಂಶಯ ಉಂಟಾದ ಕಾರಣ ಪ್ರಕರಣವನ್ನು ಸಂಪೂರ್ಣ ಹಾಗೂ ಸಮಗ್ರವಾಗಿ ತನಿಖೆ ನಡೆಸುವ ಉದ್ದೇಶದಿಂದ ಹತ್ಯೆ ಕಲಂ ಸೇರಿಸಲಾಗಿದೆ. ಫೊರೆನ್ಸಿಕ್ ಹಾಗೂ ಅಂತಿಮ ಮರಣೋತ್ತರ ಪರೀಕ್ಷಾ ವರದಿ ಇನ್ನೂ ಬರಬೇಕಿದ್ದು, ಇದು ಹತ್ಯೆಯೇ ಅಥವಾ ಅಸಹಜ ಮರಣವೇ ಎಂಬುದರ ಬಗ್ಗೆ ಆ ತನಕ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ ಎಂದು ಎಸ್ಪಿ ಹೇಳಿದ್ದಾರೆ.
ಕೆಲವರು ಪ್ರಕರಣಕ್ಕೆ ಸಂಬಂಧಿಸಿದಂತೆ ವಿವಿಧ ವಿಚಾರಗಳನ್ನು ರೂಪಿಸಿ ಆರೋಪಿಗಳ ಕುರಿತು ಊಹಾಪೋಹಗಳನ್ನು ಹರಡುತ್ತಿದ್ದಾರೆ. ತನಿಖೆ ಎಲ್ಲ ಸಾಧ್ಯತೆಗಳನ್ನು ಪರಿಶೀಲಿಸುವ ದಿಸೆಯಲ್ಲಿ ನಡೆಯುತ್ತಿದೆ. ಆದರೆ ವಿಚಾರಣೆಗೊಳಪಡಿಸಲಾದ ಪ್ರತಿಯೊಬ್ಬರೂ ಆರೋಪಿಗಳೇ ಎನ್ನುವುದಿಲ್ಲ. ಈ ಪ್ರಕರಣದ ಎಲ್ಲ ಅಂಶಗಳನ್ನು ಸಮಗ್ರವಾಗಿ ಪರಿಶೀಲಿಸಲು ನಾಲ್ಕು ತನಿಖಾ ತಂಡಗಳು ಕಾರ್ಯನಿರ್ವಹಿಸುತ್ತಿವೆ. ಇದಲ್ಲದೆ ಆಗಸ್ಟ್ 2025ರ ಒಂದು ಅಸಹಜ ಮರಣ ಪ್ರಕರಣವನ್ನು ಈ ಪ್ರಕರಣದೊಂದಿಗೆ ಜೋಡಿಸಲಾಗಿದೆ ಎಂದು ಗಮನಕ್ಕೆ ಬಂದಿದೆ. ಆ ಇನ್ನೊಂದು ಪ್ರಕರಣ ಹತ್ಯೆಯಾಗಿದೆ ಎಂಬುದಕ್ಕೆ ಯಾವುದೇ ಸಾಕ್ಷ್ಯ ಲಭ್ಯವಿಲ್ಲ. ಯಾವುದೇ ಶಂಕಿತರ ಕುರಿತು ಹರಡಲಾಗುತ್ತಿರುವ ವಿವಿಧ ವದಂತಿಗಳಿಗೆ ಸಾರ್ವಜನಿಕರು ಕಿವಿಗೊಡಬಾರದೆಂದು ಮನವಿ ಮಾಡಲಾಗಿದೆ. ಇಂತಹ ವದಂತಿಗಳನ್ನು ಹರಡುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.
























