ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಅಪರಾಧಿಗೆ 8 ವರ್ಷ ಜೈಲು

ಕಳೆದ ವರ್ಷ ಬೆಳ್ತಂಗಡಿಯಲ್ಲಿ ಸಂಭವಿಸಿದ ಪ್ರಕರಣ

ಮಂಗಳೂರು: ಅಪ್ರಾಪ್ತ ವಯಸ್ಸಿನ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪಿ ಬೆಳ್ತಂಗಡಿಯ ಶಂಕರ ಗೌಡ (60) ಎಂಬಾತನಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ಪೋಕ್ಸೊ ನ್ಯಾಯಾಲಯ 8 ವರ್ಷದ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಕಳೆದ ವರ್ಷ ಮಾರ್ಚ್‌ನಲ್ಲಿ ಶಂಕರ ಗೌಡ ತನಗೆ ಪರಿಚಯವಿದ್ದ ಬಾಲಕಿಯ ಮನೆಗೆ ತೆರಳಿ ಅಲ್ಲಿ ಯಾರೂ ಇಲ್ಲದ್ದನ್ನು ಗಮನಿಸಿ ಲೈಂಗಿಕ ಕಿರುಕುಳ ನೀಡಿದ್ದ. ಈ ಬಗ್ಗೆ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲ ಪೋಕ್ಸೊ ನ್ಯಾಯಾಲಯದ ನ್ಯಾಯಾಧೀಶ ಮೋಹನ ಜೆ.ಎಸ್. ಆರೋಪಿಗೆ ಒಟ್ಟು 8 ವರ್ಷಗಳ ಶಿಕ್ಷೆ ವಿಧಿಸಿದ್ದಾರೆ.





















































 
 

ಬಿಎನ್‌ಎಸ್ ಕಲಂ 74ರಡಿ 3 ವರ್ಷದ ಕಠಿಣ ಶಿಕ್ಷೆ ಮತ್ತು 20,000 ರೂ.ದಂಡ, ದಂಡ ಪಾವತಿಸಲು ವಿಫಲನಾದರೆ ಹೆಚ್ಚುವರಿ 6 ತಿಂಗಳ ಶಿಕ್ಷೆ, ಬಿಎನ್‌ಎಸ್ ಕಲಂ 75 (2)ರಡಿ 2 ವರ್ಷ ಕಠಿಣ ಶಿಕ್ಷೆ ಮತ್ತು 15,000 ರೂ. ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 4 ತಿಂಗಳು ಸಾದಾ ಸಜೆ, ಪೋಕ್ಸೊ ಕಾಯ್ದೆಯ ಕಲಂ 8 ರಡಿ 3 ವರ್ಷ ಕಠಿಣ ಶಿಕ್ಷೆ ಮತ್ತು 20,000 ರೂ.ದಂಡ, ದಂಡ ಪಾವತಿಸಲು ತಪ್ಪಿದರೆ ಹೆಚ್ಚುವರಿ 6 ತಿಂಗಳ ಸಾದಾ ಶಿಕ್ಷೆ ವಿಧಿಸಿದ್ದಾರೆ. ಈ ಶಿಕ್ಷೆಗಳನ್ನು ಜತೆಯಾಗಿ ಅನುಭವಿಸುವಂತೆ ತೀರ್ಪು ನೀಡಿದ್ದಾರೆ.

ದಂಡದ ಮೊತ್ತದಲ್ಲಿ 50,000 ರೂ. ಅಲ್ಲದೆ 1.50 ಲ.ರೂ ಹೆಚ್ಚುವರಿ ಪರಿಹಾರವನ್ನು ಸಂತ್ರಸ್ತೆ ಬಾಲಕಿಗೆ ನೀಡಬೇಕು ಎಂದು ನ್ಯಾಯಾಧೀಶರು ಕಾನೂನು ಸೇವಾ ಪ್ರಾಧಿಕಾರಕ್ಕೆ ನಿರ್ದೇಶನ ನೀಡಿದ್ದಾರೆ. ಧರ್ಮಸ್ಥಳ ಠಾಣಾಧಿಕಾರಿಯಾಗಿದ್ದ ಸಮರ್ಥ್ ರವೀಂದ್ರ ಗಾಣಿಗೇರ ತನಿಖೆ ನಡೆಸಿ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು. ಪೋಕ್ಸೊ ವಿಶೇಷ ಸರಕಾರಿ ಅಭಿಯೋಜಕಿ ಸಹನಾದೇವಿ ಬೋಳೂರು ವಾದಿಸಿದ್ದರು.

error: Content is protected !!
Scroll to Top