ಗೇಮಿಂಗ್ app ವ್ಯಸನದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಶಂಕೆ
ಲಖನೌ : ಮೂವರು ಹದಿಹರೆಯದ ಸಹೋದರಿಯರು ವಸತಿ ಸಂಕೀರ್ಣದ ಒಂಬತ್ತನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಉತ್ತರ ಪ್ರದೇಶದ ಘಾಜಿಯಾಬಾದ್ ನಗರದಲ್ಲಿ ಮಂಗಳವಾರ ತಡರಾತ್ರಿ ಸಂಭವಿಸಿದೆ.
ಈ ಬಾಲಕಿಯರು ಕೊರಿಯಾ ಮೂಲದ ಗೇಮ್ appನ ವ್ಯಸನಿಗಳಾಗಿದ್ದರು. ಅವರ ಆತ್ಮಹತ್ಯೆಗೆ ಇದೇ ಕಾರಣವಾಗಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ. ಮಮ್ಮಿ, ಪಾಪಾ ಸಾರಿ ಎಂದು ಡೆತ್‌ನೋಟ್ ಬರೆದಿಟ್ಟು ಮೂವರು ಸಹೋದರಿಯರು ಏಕಕಾಲದಲ್ಲಿ ತಮ್ಮ ಮನೆಯಿದ್ದ ವಸತಿ ಸಂಕೀರ್ಣದ ಒಂಬತ್ತನೇ ಮಹಡಿಯಿಂದ ಜಿಗಿದಿದ್ದಾರೆ.
ಘಾಜಿಯಾಬಾದ್‌ನ ಭರತ್ ಸಿಟಿ ಬಡಾವಣೆಯಲ್ಲಿ ಮಂಗಳವಾರ ತಡರಾತ್ರಿ 2.30ರ ವೇಳೆಗೆ ಸಂಭವಿಸಿದೆ. ಆತ್ಮಹತ್ಯೆ ಮಾಡಿಕೊಂಡ ಸಹೋದರಿಯರನ್ನು ನಿಶಿಕಾ (16), ಪ್ರಾಚಿ (14) ಮತ್ತು ಪಾಖಿ (12) ಎಂದು ಗುರುತಿಸಲಾಗಿದೆ. ಮೂವರೂ ಸಹೋದರಿಯರು ಇಡೀ ದಿನ ಮೊಬೈಲ್‌ನಲ್ಲಿ ಗೇಮ್ ಆಡುತ್ತಿದ್ದರು. ಕೊರಿಯಾದ ಒಂದು ಗೇಮ್ appಗೆ ಅವರು ಹೆಚ್ಚು ಅಂಟಿಕೊಂಡಿದ್ದರು ಎಂಬ ವಿಚಾರ ಪೊಲೀಸರ ತನಿಖೆಯಲ್ಲಿ ತಿಳಿದುಬಂದಿದೆ.
ಅವರ ಫ್ಲ್ಯಾಟ್ ಪರಿಶೀಲಿಸಿದಾಗ ಒಂಡು ಪುಟದ ಡೆತ್‌ನೋಟ್ ಪತ್ತೆಯಾಗಿದೆ. ಅದರಲ್ಲಿ ಬಾಲಕಿಯರು ಹೆತ್ತವರ ಕ್ಷಮೇ ಕೇಳಿದ್ದಾರೆ. ಆದರೆ ಬಾಲಕಿಯರ ಸಾವಿಗೆ ಗೇಮಿಂಗ್ app ಕಾರಣವೇ ಎಂಬ ವಿಚಾರ ಇನ್ನೂ ದೃಢಪಟ್ಟಿಲ್ಲ. ಅವರ ಮೊಬೈಲ್ ಫೋನ್‌ಗಳನ್ನು ವಿಧಿವಿಜ್ಞಾನ ಪರೀಕ್ಷೆಗೊಳಪಡಿಸುವ ಅಗತ್ಯ ಇದೆ ಎಂದು ಪೊಲೀಸರು ಹೇಳಿದ್ದಾರೆ.
ಕಟ್ಟಡದ ಹಿಂಭಾಗದಿಂದ ಭಾರಿ ಶಬ್ದ ಕೇಳಿದ ಕೂಡಲೇ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಪೊಲೀಸರು ಬಂದು ನೋಡಿದಾಗ ಮೂವರು ಬಾಲಕಿಯರ ಶವ ಬಿದ್ದಿತ್ತು. ಶವಗಳನ್ನು ಪೋಸ್ಟ್‌ಮಾರ್ಟಂಗೆ ಕಳುಹಿಸಲಾಗಿದೆ. ಸಾವಿನ ಕಾರಣವನ್ನು ಪತ್ತೆಹಚ್ಚಲು ಪೊಲೀಸರು ಬಾಲಕಿಯರ ಹೆತ್ತವರನ್ನು ಪ್ರಶ್ನಿಸುತ್ತಿದ್ದಾರೆ.
























