ಅಬಕಾರಿ ಇಲಾಖೆಯ ಭಾರಿ ಭ್ರಷ್ಟಾಚಾರದ ವಿರುದ್ಧ ಅಹೋರಾತ್ರಿ ಧರಣಿ ನಡೆಸಿದ ವಿಪಕ್ಷ

ತಮಟೆ ಬಾರಿಸಿ, ಭಜನೆ ಹಾಡಿ ಸರ್ಕಾರದ ವಿರುದ್ಧ ವಿನೂತನ ರೀತಿಯಲ್ಲಿ ಪ್ರತಿಭಟನೆ

ಬೆಂಗಳೂರು: ರಾಜ್ಯ ಅಬಕಾರಿ ಇಲಾಖೆಯಲ್ಲಿ ನಡೆದಿರುವ ಭಾರಿ ಪ್ರಮಾಣದ ಭ್ರಷ್ಟಾಚಾರದ ಹಿನ್ನೆಲೆಯಲ್ಲಿ ಅಬಕಾರಿ ಸಚಿವ ಆರ್.ಬಿ.ತಿಮ್ಮಾಪುರ ರಾಜೀನಾಮೆಗೆ ಆಗ್ರಹಿಸಿ ಬಿಜೆಪಿ ಮತ್ತು ಜೆಡಿಎಸ್ ಪಕ್ಷಗಳು ವಿಧಾನಸೌಧದಲ್ಲಿ ಅಹೋರಾತ್ರಿ ಧರಣಿ ನಡೆಸಿವೆ. ವಿಪಕ್ಷ ನಾಯಕ ಆರ್.ಅಶೋಕ್ ನೇತೃತ್ವದಲ್ಲಿ ನಡೆದ ಈ ಪ್ರತಿಭಟನೆಯಲ್ಲಿ, ಶಾಸಕರು ಜಾಗಟೆ ಬಾರಿಸಿ, ಹಾಡು ಹಾಡಿ ವಿಭಿನ್ನವಾಗಿ ತಮ್ಮ ಆಕ್ರೋಶ ವ್ಯಕ್ತಪಡಿಸಿದರು. ವಿಧಾನಸಭೆ ಆವರಣದಲ್ಲೇ ರಾತ್ರಿ ಊಟ ಮಾಡಿ, ವಿಶ್ರಮಿಸುವ ಮೂಲಕ ಸರ್ಕಾರದ ವಿರುದ್ಧ ನಾಯಕರು ಕಿಡಿಕಾರಿದರು.

ತಮಟೆ, ಭಜನೆ ಮಾಡಿ ಅಹೋರಾತ್ರಿ ಪ್ರತಿಭಟಿಸಿದ ಶಾಸಕರು ಅಬಕಾರಿ ಇಲಾಖೆಯಲ್ಲಿ 6 ಸಾವಿರ ಕೋಟಿ ರೂ. ಹಗರಣ ನಡೆದಿದೆ. ಅಸ್ಸಾಂ, ತಮಿಳುನಾಡು, ಕೇರಳ ಚುನಾವಣೆಗೆ ಈ ಹಣಕ ಬಳಕೆ ಮಾಡಲಾಗುತ್ತದೆ. ತಿಮ್ಮಾಪುರ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪ್ರತಿಭಟನೆ ನಡೆಸುತ್ತೇವೆ ಎಂದು ಪಟ್ಟು ಹಿಡಿದಿದ್ದಾರೆ.





















































 
 

ಮೊಗಸಾಲೆ ಪ್ರವೇಶ ದ್ವಾರದಲ್ಲಿ ಕುಳಿತ ಸದಸ್ಯರು ತಮಟೆ ಬಾರಿಸಿ ಆಕ್ರೋಶ ಹೊರಹಾಕಿದರು. ಕೋಟಿ ಕೋಟಿ ಲೂಟಿ, ರಾಜೀನಾಮೆ ಕೊಡಲೇಬೇಕು ಎಂದು ಹಾಡು ಹಾಡಿದರು. ಗೋವಿಂದ ಗೋವಿಂದ ಕೋಟಿ ಕೋಟಿ ಗೋವಿಂದ ಘೋಷಣೆ ಮೂಲಕ ವ್ಯಂಗ್ಯ ಮಾಡಿದರು. ನಂತರ ವಿಧಾನಸೌಧದ ಕಾರಿಡಾರ್‌ನಲ್ಲಿ ಹೆಜ್ಜೆ ಹಾಕಿ ಹಾಡನ್ನು ಹಾಡುವ ಮೂಲಕ ಪ್ರತಿಭಟಿಸಿದರು. ರಾತ್ರಿ ವಿಧಾನಸೌಧದ ಮೊಗಸಾಲೆಗೆ ಹಾಸಿಗೆಗಳನ್ನು ತಂದು ಸದಸ್ಯರು ನಿದ್ದೆ ಮಾಡಿದರು.

ಇಂದು ಬೆಳಗ್ಗೆ 4 ಗಂಟೆಗೆ ಎದ್ದು ಚಹಾ ಕುಡಿದು ವಿಧಾನಸೌಧದ ಒಳಭಾಗದಲ್ಲೇ ಶಾಸಕರು ವಾಕಿಂಗ್‌ ಮಾಡಿದರು. ಮಂಗಳೂರಿನ ಬಿಜೆಪಿ ಶಾಸಕ ಭರತ್ ಶೆಟ್ಟಿ ಪ್ರತಿಕ್ರಿಯಿಸಿ, ಅಬಕಾರಿ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಈ ಹಿಂದೆ ವಾಲ್ಮೀಕಿ ಹಗರಣ ನಡೆದಾಗ ತೆಲಂಗಾಣ ಚುನಾವಣೆ ಇತ್ತು. ಈಗ ತಮಿಳುನಾಡು ಚುನಾವಣೆ ಇದೆ. ಹೀಗಾಗಿ ಇಲ್ಲೂ ಭ್ರಷ್ಟಾಚಾರ ನಡೆದಿದ್ದು ತನಿಖೆಯಾಗಬೇಕು. ಮುಂದಿನ ಹೋರಾಟ ಸಂಬಂಧ ಇವತ್ತು‌ ಬಿಜೆಪಿ, ಜೆಡಿಎಸ್ ಸಭೆ ಮಾಡಿ ತೀರ್ಮಾನ ಮಾಡುತ್ತೇವೆ ಎಂದು ತಿಳಿಸಿದರು.

ಜೆಡಿಎಸ್ ಶಾಸಕ ಸುರೇಶ್ ಬಾಬು ಪ್ರತಿಕ್ರಿಯಿಸಿ, ಸರ್ಕಾರದ ವಿರುದ್ಧ ಹೋರಾಟ ನಿಲ್ಲುವುದಿಲ್ಲ. ದಾಖಲೆ ಸಮೇತ ಸರ್ಕಾರದ ಮುಂದಿಟ್ಟರೂ ಸರ್ಕಾರ ಒಪ್ಪುವ ಪರಿಸ್ಥಿತಿಯಲ್ಲಿಲ್ಲ. ಮುಖ್ಯಮಂತ್ರಿ ಈ ಹಿಂದೆ ಇದ್ದಂತೆ ಇಲ್ಲ. ಸಿದ್ದರಾಮಯ್ಯನವರು ಏನೂ ಮಾಡಲಾಗದ ಪರಿಸ್ಥಿತಿಯಲ್ಲಿದ್ದಾರೆ. ಇಂದೂ ಎರಡು ಪಕ್ಷದವರ ಹೋರಾಟ ಮುಂದುವರೆಯುತ್ತದೆ. ಪ್ರತಿಭಟನೆ ವೇಳೆ ಕುಮಾರಸ್ವಾಮಿಯವರ ಅನುಪಸ್ಥಿತಿ ಕಾಡುತ್ತಿದೆ. ಅವರು ಇಲ್ಲಿ ಇದ್ದಿದ್ದರೆ ವಿಚಾರವನ್ನ ಇನ್ನೂ ಹೆಚ್ಚಿನ ಮಟ್ಟಕ್ಕೆ ತೆಗೆದುಕೊಂಡು ಹೋಗಬಹುದಿತ್ತು ಎಂದರು.

error: Content is protected !!
Scroll to Top