ಬ್ಯಾಟಿಂಗ್‌, ಬೌಲಿಂಗ್‌ ಎರಡರಲ್ಲೂ ಅಬ್ಬರಿಸಿದ ಭಾರತ : ಕೊನೆಯ ಪಂದ್ಯದಲ್ಲಿ ಅಮೋಘ ಗೆಲುವು

ಇಶಾನ್‌ ಕಿಶನ್‌ ಶತಕ, ಆರ್ಷದೀಪ್‌ 5 ವಿಕೆಟ್‌ಗಳ ಗುಚ್ಚ ಪಂದ್ಯದ ಹೈಲೈಟ್‌

ತಿರುವನಂತಪುರಂ: ಇಶಾನ್‌ ಕಿಶನ್‌ ಮತ್ತು ಸೂರ್ಯಕುಮಾರ್‌ ಯಾದವ್‌ ಸಿಡಿಲಬ್ಬರದ ಬ್ಯಾಟಿಂಗ್‌, ಅರ್ಷ್‌ದೀಪ್‌ ಸಿಂಗ್‌ ಬೆಂಕಿ ಬೌಲಿಂಗ್‌ ದಾಳಿ ನೆರವಿನಿಂದ ನ್ಯೂಜಿಲೆಂಡ್‌ ವಿರುದ್ಧ ಭಾರತ 46 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಈ ಮೂಲಕ 5 ಪಂದ್ಯಗಳ ಟಿ20 ಸರಣಿಯನ್ನು 4-1 ಅಂತರದಲ್ಲಿ ಕೈವಶ ಮಾಡಿಕೊಂಡಿದೆ. ಈ ಪಂದ್ಯ ಹಲವು ದಾಖಲೆಗಳಿಗೂ ಸಾಕ್ಷಿಯಾಯಿತು.

ತಿರುವನಂತಪುರಂ ಗ್ರೀನ್‌ಫೀಲ್ಡ್ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ನಡೆದ ಟಿ20 ಸರಣಿಯ ಕೊನೇ ಪಂದ್ಯ ವೀಕೆಂಡ್‌ನಲ್ಲಿ ಅಭಿಮಾನಿಗಳ ಕಣ್ಣಿಗೆ ಹಬ್ಬವಾಗಿತ್ತು. ಸಿಕ್ಸರ್‌, ಬೌಂಡರಿ ಆಟದಲ್ಲಿ ಬರೋಬ್ಬರಿ 36 ಸಿಕ್ಸ್‌, 36 ಬೌಂಡರಿಗಳು ಸಿಡಿದವು. ಭಾರತದ ಪರ 23 ಸಿಕ್ಸರ್‌, 17 ಬೌಂಡರಿ ದಾಖಲಾದ್ರೆ, ಕಿವೀಸ್‌ ಪರ 13 ಸಿಕ್ಸರ್‌, 19 ಬೌಂಡರಿಗಳು ದಾಖಲಾದವು.





















































 
 

ಗೆಲುವಿಗೆ 272 ರನ್‌ಗಳ ಬೃಹತ್‌ ಗುರಿ ಪಡೆದಿದ್ದ ನ್ಯೂಜಿಲೆಂಡ್‌ 17 ರನ್‌ಗಳಿಗೆ ಮೊದಲ ವಿಕೆಟ್‌ ಕಳೆದುಕೊಂಡರೂ ಬಳಿಕ ಅಬ್ಬರಿಸಲು ಶುರು ಮಾಡಿತು. ಫಿನ್‌ ಅಲೆನ್‌, ರಚಿನ್‌ ರವೀಂದ್ರ ಸ್ಫೋಟಕ ಬ್ಯಾಟಿಂಗ್‌ ನಿಂದ 8 ಓವರ್‌ಗಳಲ್ಲೇ ಶತಕ ಬಾರಿಸಿತ್ತು. ಒಂದು ಹಂದಲ್ಲಿ ಈ ಜೋಡಿಯ ಬ್ಯಾಟಿಂಗ್‌ ಮುಂದುವರಿದರೆ ಪಂದ್ಯದ ಫಲಿತಾಂಶವೇ ಬದಲಾಗುವ ಸಾಧ್ಯತೆಯಿತ್ತು. ಆದ್ರೆ ಫಿನ್‌ ಅಲ್ಲೆನ್‌ ಆರ್ಭಟಕ್ಕೆ ಅಕ್ಷರ್‌ ಪಟೇಲ್‌ ಬ್ರೇಕ್‌ ಹಾಕಿದರು.

9ನೇ ಓವರ್‌ನಲ್ಲಿ ಬೌಲಿಂಗ್‌ಗೆ ಬಂದ ಅಕ್ಷರ್‌ ಪಟೇಲ್‌ ಮೊದಲ ಎಸೆತದಲ್ಲೇ ಸ್ಟಂಪ್‌ ಔಟ್‌ಗೆ ಅವಕಾಶ ಮಾಡಿಕೊಟ್ಟರು. ಇಶಾನ್‌ ಕಿಶನ್‌ ಅವರ ವೈಫಲ್ಯದಿಂದ ಫಿನ್‌ ಅಲ್ಲೆನ್‌ ಬಚಾವ್‌ ಆಗಿದ್ದರು. ಅದೇ ಓವರ್‌ನ ಕೊನೆ ಎಸೆತದಲ್ಲಿ ದೊಡ್ಡ ಹೊಡೆತಕ್ಕೆ ಯತ್ನಿಸಿದ ಅಲ್ಲೆನ್‌ ಬೌಂಡರಿ ಲೈನ್‌ ಬಳಿ ಕ್ಯಾಚ್‌ಕೊಟ್ಟು ಪೆವಿಲಿಯನ್‌ಗೆ ಮರಳಿದರು. ಇಲ್ಲಿಂದೀಚೆಗೆ ಭಾರತೀಯ ಬೌಲರ್‌ಗಳ ಪರಾಕ್ರಮವೇ ಸದ್ದು ಮಾಡಿತು. ಕಿವೀಸ್‌ ಬ್ಯಾಟರ್‌ಗಳು ಪೆವಿಲಿಯನ್‌ ಪರೇಡ್‌ ನಡೆಸಲು ಶುರು ಮಾಡಿದ್ರು. ಹೀಗಾಗಿ ನ್ಯೂಜಿಲೆಂಡ್‌ 19.4 ಓವರ್‌ಗಳಲ್ಲಿ 225 ರನ್‌ಗಳಿಗೆ ಆಲೌಟ್‌ ಆಯಿತು.

ಕಿವೀಸ್‌ ಪರ ಫಿನ್‌ ಅಲ್ಲೆನ್‌ 38 ಎಸೆತಗಳಲ್ಲಿ ಸ್ಫೋಟಕ 80 ರನ್‌ (6 ಸಿಕ್ಸರ್‌, 8 ಬೌಂಡರಿ) ಚಚ್ಚಿದ್ರೆ, ರಚಿನ್‌ ರವೀಂದ್ರ 30 ರನ್‌, ಡೇರಿಲ್‌ ಮಿಚೆಲ್‌ 12 ಎಸೆತಗಳಲ್ಲಿ 26 ರನ್‌, ಐಶ್‌ ಸೋಡಿ 15 ಎಸೆತಗಳಲ್ಲಿ 33 ರನ್‌ ಬಾರಿಸಿದ್ರು. ಉಳಿದೆಲ್ಲರೂ ಅಲ್ಪಮೊತ್ತಕ್ಕೆ ಔಟಾಗಿ ತಂಡದ ಸೋಲಿಗೆ ಕಾರಣವಾದರು.

ಟೀಂ ಇಂಡಿಯಾ ಪರ ಅರ್ಷ್‌ದೀಪ್‌ 5 ವಿಕೆಟ್‌, ಅಕ್ಷರ್‌ ಪಟೇಲ್‌ 3 ವಿಕೆಟ್‌ ಕಿತ್ತರೆ, ರಿಂಕು ಸಿಂಗ್‌, ವರುಣ್‌ ಚಕ್ರವರ್ತಿ ತಲಾ ಒಂದು ವಿಕೆಟ್‌ ಕಿತ್ತರು. ಕಿವೀಸ್‌ ಪರ ಲಾಕಿ ಫರ್ಗೂಸನ್‌ 2 ವಿಕೆಟ್‌ ಕಿತ್ತರೆ, ಮಿಚೆಲ್‌ ಸ್ಯಾಂಟ್ನರ್‌, ಕೈಲ್‌ ಜೇಮಿಸನ್‌, ಜಾಕೋಬ್‌ ಡಫ್ಫಿ ತಲಾ ಒಂದೊಂದು ವಿಕೆಟ್‌ ಕಿತ್ತರು.

ಇದಕ್ಕೂ ಮುನ್ನ ಬ್ಯಾಟಿಂಗ್‌ ಮಾಡಿದ ಟೀಂ ಇಂಡಿಯಾ ಪರ ಇಶಾನ್‌ ಕಿಶನ್‌ 103 ರನ್‌, ಸೂರ್ಯಕುಮಾರ್‌ ಯಾದವ್‌ 63 ರನ್‌, ಹಾರ್ದಿಕ್‌ ಪಾಂಡ್ಯ 42 ರನ್‌, ಅಭಿಷೇಕ್‌ ಶರ್ಮಾ 30 ರನ್‌ ಬಾರಿಸಿರು.

2026ರ ಟಿ20 ವಿಶ್ವಕಪ್‌ಗೂ ಮುನ್ನ ಭಾರತ ನ್ಯೂಜಿಲೆಂಡ್ ವಿರುದ್ಧ ಐದು ಪಂದ್ಯಗಳ ಟಿ20 ಸರಣಿಯನ್ನು ಗೆಲ್ಲುವ ಮೂಲಕ ಭಾರತ ಅಪಾರ ಆತ್ಮವಿಶ್ವಾಸ ಸಂಪಾದಿಸಿಕೊಂಡಿದೆ. ಭಾರತ ಈಗಾಗಲೇ ಮೊದಲ ಮೂರು ಪಂದ್ಯಗಳನ್ನು ಗೆಲ್ಲುವ ಮೂಲಕ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಕಿವೀಸ್ ನಾಲ್ಕನೇ ಪಂದ್ಯವನ್ನು ಗೆಲ್ಲುವ ಮೂಲಕ ಭಾರತಕ್ಕೆ ದಿಟ್ಟ ಉತ್ತರ ನೀಡಿತ್ತು. ಇದೀಗ ಐದನೇ ಪಂದ್ಯವನ್ನು ಏಕಪಕ್ಷೀಯವಾಗಿ ಗೆದ್ದುಕೊಂಡಿರುವ ಟೀಂ ಇಂಡಿಯಾ, ಸರಣಿ ಗೆಲುವಿನೊಂದಿಗೆ ಟಿ20 ವಿಶ್ವಕಪ್​ಗೆ ಕಾಲಿಡುತ್ತಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ ಭಾರತ ತಂಡದ 20 ಓವರ್‌ಗಳಲ್ಲಿ 5 ವಿಕೆಟ್‌ಗಳ ನಷ್ಟಕ್ಕೆ 271 ರನ್‌ಗಳ ಬೃಹತ್ ಮೊತ್ತ ಪೇರಿಸಿತು. ತಂಡದ ಪರ ಎಂದಿನಂತೆ ಸಂಜು ಸ್ಯಾಮ್ಸನ್ ಮತ್ತು ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಆರಂಭಿಸಿದರಾದರೂ ಇಬ್ಬರೂ 42 ರನ್‌ಗಳೊಳಗೆ ಔಟಾದರು. ನಂತರ ಇಶಾನ್ ಕಿಶನ್ ಸ್ಫೋಟಕ ಬ್ಯಾಟಿಂಗ್ ಪ್ರದರ್ಶಿಸಿ, ಕೇವಲ 43 ಎಸೆತಗಳಲ್ಲಿ 6 ಬೌಂಡರಿ ಮತ್ತು 10 ಸಿಕ್ಸರ್‌ಗಳ ಸಹಿತ 103 ರನ್​ಗಳ ಸಿಡಿಲಬ್ಬರದ ಶತಕ ಸಿಡಿಸಿದರು.

error: Content is protected !!
Scroll to Top