ಐಟಿ ಅಧಿಕಾರಿಗಳ ಕಿರುಕುಳ ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆಗೆ ಕಾರಣ : ಸಹೋದರನ ಆರೋಪ

ಪದೇ ಪದೆ ದಾಳಿ ನಡೆಸುತ್ತಿದ್ದ ಕೇರಳದ ಐಟಿ ಅಧಿಕಾರಿಗಳು

ಬೆಂಗಳೂರು: ಉದ್ಯಮಿ ಸಿ.ಜೆ.ರಾಯ್ ಆತ್ಮಹತ್ಯೆಗೆ ಐಟಿ ಅಧಿಕಾರಿಗಳ ಕಿರುಕುಳ ಹಾಗೂ ಒತ್ತಡವೇ ಕಾರಣ ಎಂದು ಸಹೋದರ ಸಿ.ಜೆ.ಬಾಬು ಗಂಭೀರ ಆರೋಪ ಮಾಡಿದ್ದಾರೆ. ಕೇರಳದ ಐಟಿ ಅಧಿಕಾರಿಗಳು ಜ.28ರಿಂದಲೂ ನನ್ನ ತಮ್ಮ ಸಿ.ಜೆ.ರಾಯ್ ಅವರನ್ನು ವಿಚಾರಣೆ ಮಾಡುತ್ತಿದ್ದರು. ಶುಕ್ರವಾರವೂ ಕಚೇರಿಗೆ ಬಂದು ವಿಚಾರಣೆ ಮಾಡಿದ್ದಾರೆ. ಐಟಿ ಇಲಾಖೆಯ ಅಡಿಷನಲ್ ಕಮಿಷನರ್ ಕೃಷ್ಣ ಪ್ರಸಾದ್ ಸಹ ಅಧಿಕಾರಿಗಳ ತಂಡದಲ್ಲಿದ್ದರು ಎಂದು ಹೇಳಿದ್ದಾರೆ.

ಈ ಐಟಿ ಅಧಿಕಾರಿಗಳು ಜ.27ರಂದು ನನ್ನ ಮನೆಗೆ ಬಂದು ನನ್ನನ್ನೂ ವಿಚಾರಣೆ ಮಾಡಿದ್ದರು. ಅವರ ಪ್ರಶ್ನೆಗಳಿಗೆ ಉತ್ತರಿಸಿದ್ದೆ. ಗುರುವಾರ ಸಿ.ಜೆ.ರಾಯ್ ನನಗೆ ಕರೆ ಮಾಡಿ ಯಾವಾಗ ಬರುವೆ ಎಂದು ಕೇಳಿದರು. ಅದಕ್ಕೆ ಶುಕ್ರವಾರ ಸಂಜೆ ಬರುವೆ ಎಂದಿದ್ದೆ. ಐಟಿ ಅಧಿಕಾರಿಗಳ ಒತ್ತಡ ಇದೆ ಎಂದು ರಾಯ್ ಹೇಳಿಕೊಂಡಿದ್ದರು. ಶುಕ್ರವಾರ ಬೆಳಗ್ಗೆ ಸಹ ನನಗೆ ಕರೆ ಮಾಡಿ ಇಂದೂ ಐಟಿ ಅಧಿಕಾರಿಗಳು ಕಚೇರಿಗೆ ಬರುತ್ತಿರುವ ವಿಚಾರ ಹೇಳಿದರು ಎಂದು ತಿಳಿಸಿದ್ದ.





















































 
 

ಡಿಸೆಂಬರ್ ತಿಂಗಳಲ್ಲೂ ಕೇರಳದ ಐಟಿ ಅಧಿಕಾರಿಗಳು ಆದಾಯ ತೆರಿಗೆ ವಿಚಾರವಾಗಿ ಸಿ.ಜೆ.ರಾಯ್ ಕಚೇರಿಗೆ ಬಂದು ವಿಚಾರಣೆ ಮಾಡಿದ್ದರು. ನನ್ನ ತಮ್ಮ ರಾಯ್‌ಗೆ ಸಾಲ ಇರಲಿಲ್ಲ, ವೈರಿಗಳು ಇರಲಿಲ್ಲ, ಬೆದರಿಕೆಗಳು ಇರಲಿಲ್ಲ. ಕೌಟುಂಬಿಕ ಸಮಸ್ಯೆಗಳೂ ಇರಲಿಲ್ಲ. ಯಾವ ಕಾರಣಕ್ಕೆ ಹೀಗೆ ಮಾಡಿಕೊಂಡರು ಎಂದು ಗೊತ್ತಿಲ್ಲ ಎಂದಿದ್ದಾರೆ.

ಐಟಿ ಅಧಿಕಾರಿಗಳ ಒತ್ತಡ ಇದ್ದದ್ದು ಸತ್ಯ. ಅವರ ಟಾರ್ಗೆಟ್‌ ಏನೆಂಬುದು ಗೊತ್ತಿಲ್ಲ. ಐಟಿ ಇಲಾಖೆ ಅಡಿಷನಲ್ ಕಮಿಷನರ್ ಕೃಷ್ಣಪ್ರಸಾದ್ ಅವರನ್ನು ಈ ಬಗ್ಗೆ ಪ್ರಶ್ನೆ ಮಾಡಬೇಕು ಎಂದು ತಿಳಿಸಿದರು.

8500 ಕೋಟಿ ರೂ. ಮೌಲ್ಯದ ವ್ಯವಹಾರ ಸಾಮ್ರಾಜ್ಯ

ಸಾವಿರಾರು ಕೋಟಿ ಮೌಲ್ಯದ ಕಾನ್ಫಿಡೆಂಟ್ ಗ್ರೂಪ್ ಕಟ್ಟಿದ್ದ ಸರದಾರ ಐಟಿ ಇಕ್ಕಳಕ್ಕೆ ಸಿಲುಕಿ ಕಾನ್ಫಿಡೆಂಟ್ ಕಳೆದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬ ಆರೋಪವೇ ಬಲವಾಗುತ್ತಿದೆ. ಸಿ.ಜೆ ರಾಯ್ 8,500 ಕೋಟಿ ರೂ. ಸಾಮ್ರಾಜ್ಯ ಕಟ್ಟಿದ್ದರು.

ಡಾ.ಚೆರಿಯನ್ ಕಂಡತ್ ಜೋಸೆಫ್ ರಾಯ್ ಅಲಿಯಾಸ್ ಸಿ.ಜೆ ರಾಯ್ ಬಿಲಿಯನೇರ್ ಆಗಿದ್ದೇ ರೋಚಕ ಕಥೆ. ಎಚ್‌ಪಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸಾಮಾನ್ಯ ಉದ್ಯೋಗಿಯೊಬ್ಬ ಸಾವಿರಾರು ಕೋಟಿ ಮೌಲ್ಯದ ಉದ್ಯಮ ಕಟ್ಟಿ ಹೆಮ್ಮರವಾಗಿ ಬೆಳೆಸಿದ್ದು ಸುಲಭದ ಮಾತಲ್ಲ. ಕೇರಳದ ಕೊಚ್ಚಿಯಲ್ಲಿ ಹುಟ್ಟಿ ಬೆಂಗಳೂರಲ್ಲಿ ಬೆಳೆದ ಸಿ.ಜೆ ರಾಯ್ ಎಚ್‌ಪಿ ಕಂಪನಿಯಲ್ಲಿ ಕೆಲಸ ಬಿಟ್ಟು ಉದ್ಯಮ ಆರಂಭಿಸಿದರು. 2006ರಲ್ಲಿ ರಿಯಲ್ ಎಸ್ಟೇಟ್ ಉತ್ತುಂಗದಲ್ಲಿದ್ದ ಸಾಲಮುಕ್ತ ನೀತಿಯಡಿ ಉದ್ಯಮವನ್ನು ಬೆಂಗಳೂರು, ಕೇರಳ, ದಕ್ಷಿಣ ಭಾರತದ ಪ್ರಮುಖ ನಗರಗಳಲ್ಲಿ ಹಲವಾರು ನಿವಾಸ, ವಾಣಿಜ್ಯ, ಟೌನ್‌ಶಿಪ್ ನಿರ್ಮಾಣ ಮಾಡಿದರು. ಅಮೆರಿಕ ಮತ್ತು ಯುಎಇಗೆ ಬಿಸಿನೆಸ್ ವಿಸ್ತರಿಸಿದರು. ಕಾನ್ಫಿಡೆಂಟ್‌ ಗ್ರೂಪ್ 159ಕ್ಕೂ ಹೆಚ್ಚು ಯೋಜನೆಗಳನ್ನು ಪೂರ್ಣಗೊಳಿಸಿ, ಕೋಟ್ಯಂತರ ಗ್ರಾಹಕರಿಗೆ ಮನೆಗಳನ್ನು ಒದಗಿಸಿತು.

ರಿಯಲ್ ಎಸ್ಟೇಟ್ ಜೊತೆಗೆ ಹಾಸ್ಪಿಟಾಲಿಟಿ, ನಿರ್ಮಾಣ ಕ್ಷೇತ್ರ, ಶಿಕ್ಷಣ, ಸಿನಿಮಾ ಮೊದಲಾದ ವ್ಯವಹಾರಗಳಲ್ಲಿ ವ್ಯಾಪಕವಾಗಿ ಬಿಸಿನೆಸ್ ಮಾಡಿದರು. ಸಿ.ಜೆ ರಾಯ್ ಆಸ್ತಿ ಮೌಲ್ಯ 8,500 ಕೋಟಿ ಎಂದು ಅಂದಾಜಿಸಲಾಗಿದೆ. ರೋಲ್ಸ್‌ರಾಯ್, ಲ್ಯಾಂಬೋರ್ಗಿನಿ, ಬುಗಾಟಿ ಸೇರಿದಂತೆ ಲಕ್ಸುರಿ ಕಾರುಗಳ ಸಂಗ್ರಹವನ್ನು ಹೊಂದಿದ್ದರು. ಮಲಯಾಳಂ, ಕನ್ನಡ ಸಿನಿಮಾಗಳಲ್ಲಿ ಸಹ ಹೂಡಿಕೆ ಮಾಡಿ ಸಕ್ಸೆಸ್ ಕಂಡಿರು. 2012ರಲ್ಲಿ ಮೋಹನ್‌ಲಾಲ್ ನಟನೆಯ ಕ್ಯಾಸನೋವಾ ಚಿತ್ರವು ಹಣ, ಕೀರ್ತಿ ಎರಡನ್ನೂ ಗಳಿಸಿಕೊಟ್ಟಿತ್ತು. ಬಹಳ ಕಾಲದವರೆಗೆ ಬಿಗ್‌ಬಾಸ್ ಮಲಯಾಳಂ ಮತ್ತು ಇತರ ರಿಯಾಲಿಟಿ ಶೋ ಗಳಿಗೆ ಪ್ರಾಯೋಜಕತ್ವ ನೀಡಿದ್ದರು.

ಇಷ್ಟೆಲ್ಲಾ ಸಾಮ್ರಾಜ್ಯ ಕಟ್ಟಿದ್ದ ಸಿ.ಜೆ ರಾಯ್ ಜನವರಿ 30ರಂದು ಕಾನ್ಫಿಡೆಂಟ್ ಗ್ರೂಪ್ ಕಚೇರಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 57ನೇ ವಯಸ್ಸಿನಲ್ಲಿ ಪತ್ನಿ, ಪುತ್ರ ಮತ್ತು ಪುತ್ರಿಯನ್ನು ಅಗಲಿದ್ದು ಸಾವಿರಾರು ಕೋಟಿಯ ಸಾಮ್ರ‍್ಯಾಜ್ಯವನ್ನ ಬಿಟ್ಟು ತೆರಳಿದ್ದಾರೆ.

error: Content is protected !!
Scroll to Top