ಮಹಾರಾಷ್ಟ್ರದ ಮೊದಲ ಮಹಿಳಾ ಉಪಮುಖ್ಯಮಂತ್ರಿಯಾಗಲಿರುವ ಸುನೇತ್ರಾ
ಮುಂಬೈ: ಮಹಾರಾಷ್ಟ್ರದ ಕ್ಷಿಪ್ರ ರಾಜಕೀಯ ಬೆಳವಣಿಗೆಯಲ್ಲಿ ಎನ್‌ಸಿಪಿ ಮುಖ್ಯಸ್ಥ ಅಜಿತ್ ಪವಾರ್ ಪತ್ನಿ ಸುನೇತ್ರಾ ಪವಾರ್ ಅವರನ್ನು ಉಪ ಮುಖ್ಯಮಂತ್ರಿ ಹುದ್ದೆಗೆ ಆಯ್ಕೆ ಮಾಡಲಾಗಿದೆ. ಇಂದು ಅವರು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಮೂಲಕ ಮಹಾರಾಷ್ಟ್ರ ಮೊದಲ ಬಾರಿಗೆ ಮಹಿಳಾ ಉಪಮುಖ್ಯಮಂತ್ರಿಯನ್ನು ಹೊಂದಲಿದೆ.
ಉಪಮುಖ್ಯಮಂತ್ರಿಯಾಗಿದ್ದ ಎನ್‌ಸಿಪಿ ನಾಯಕ ಅಜಿತ್ ಪವಾರ್ ವಿಮಾನ ಅವಗಟದಲ್ಲಿ ನಿಧನರಾದ ಬಳಿಕ ಅವರ ಸ್ಥಾನಕ್ಕೆ ಯಾರು ಎಂಬ ಪ್ರಶ್ನೆ ಎದುರಾಗಿತ್ತು. ಕ್ಷಿಪ್ರವಾಗಿ ನಡೆದ ರಾಜಕೀಯ ಬೆಳವಣಿಗೆಯಲ್ಲಿ ಅವರ ಪತ್ನಿ ರಾಜ್ಯಸಭಾ ಸದಸ್ಯೆ ಸುನೇತ್ರಾ ಪವಾರ್ ಅವರೇ ಉತ್ತರಾಧಿಕಾರಿ ಸ್ಥಾನ ಅಲಂಕರಿಸಲಿದ್ದಾರೆ.
ಶುಕ್ರವಾರದ ನಡೆದ ಎನ್‌ಸಿಪಿ ಮುಖಂಡರ ಸಭೆಯಲ್ಲಿ ಸುನೇತ್ರಾ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಆಯ್ಕೆ ಮಾಡಲು ಒಮ್ಮತದಿಂದ ನಿರ್ಧರಿಸಲಾಗಿದೆ. ಪಕ್ಷದ ಮುಖಂಡರ ಆಶಯದಂತೆ ಎನ್‌ಸಿಪಿ ಶಾಸಕಾಂಗ ಪಕ್ಷದ ನಾಯಕ ಸ್ಥಾನ ವಹಿಸಿಕೊಳ್ಳಲು ಸುನೇತ್ರಾ ಪವಾರ್ ಸಮ್ಮತಿಸಿದ್ದಾರೆ.
ಮುಂಬೈಯಲ್ಲಿ ಶನಿವಾರ ಎನ್‌ಸಿಪಿ ಶಾಸಕಾಂಗ ಪಕ್ಷದ ಸಭೆ ನಡೆದು ಸುನೇತ್ರಾ ಪವಾರ್ ಅವರನ್ನು ಶಾಸಕಾಂಗ ಪಕ್ಷದ ನಾಯಕಿಯಾಗಿ ಔಪಚಾರಿಕವಾಗಿ ಘೋಷಣೆ ಮಾಡಲಾಗುತ್ತದೆ. ಶನಿವಾರ ಸಂಜೆ 5 ಗಂಟೆಗೆ ಮಹಾಯುತಿ ಸರ್ಕಾರದಲ್ಲಿ ಉಪ ಮುಖ್ಯಮಂತ್ರಿಯಾಗಿ ಸುನೇತ್ರಾ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ಬಿಜೆಪಿ-ಶಿವಸೇನೆ-ಎನ್‌ಸಿಪಿ ಒಳಗೊಂಡ ಮಹಾಯುತಿ ಸರಕಾರದಲ್ಲಿ ಅಜಿತ್ ಪವಾರ್ ಹಣಕಾಸು ಖಾತೆ ಜತೆಗೆ ಡಿಸಿಎಂ ಸ್ಥಾನ ಅಲಂಕರಿಸಿದ್ದರು.
ಅಜಿತ್ ಪವಾರ್ ನಿಧನದ ಬಳಿಕ ಡಿಸಿಎಂ ಹುದ್ದೆ ಹಾಗೂ ಹಣಕಾಸು ಖಾತೆಯನ್ನು ಯಾರಿಗೆ ನೀಡಬೇಕು ಎಂಬ ಕುರಿತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಜತೆ ಎನ್‌ಸಿಪಿ ನಾಯಕರಾದ ಪ್ರಫುಲ್ ಪಟೇಲ್, ಛಗನ್ ಭುಜಬಲ್, ಸುನಿಲ್ ತಟ್ಕರೆ, ಧನಂಜಯ ಮುಂಡೆ ಸಮಾಲೋಚನೆ ನಡೆಸಿದರು. ಅಜಿತ್ ಸ್ಥಾನಕ್ಕೆ ಸುನೇತ್ರಾ ಅವರನ್ನು ಆಯ್ಕೆ ಮಾಡುವಂತೆ ಪಕ್ಷದ ನಾಯಕರು ಮನವಿ ಮಾಡಿದರು. ಬಳಿಕ ಸಂಭಾವ್ಯ ಸಂಪುಟ ಪುನಾರಚನೆ ಬಗ್ಗೆ ಸಿಎಂ ಫಡ್ನವಿಸ್ ಅವರು ಡಿಸಿಎಂ ಏಕನಾಥ್ ಶಿಂಧೆ, ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ರವೀಂದ್ರ ಚೌಹಾಣ್ ಜತೆ ಚರ್ಚಿಸಿದರು.
























