ಉಳ್ಳಾಲ: ದ.ಕ. ಜಿಲ್ಲೆಯ ಸೋಮೇಶ್ವರದ ಉಚ್ಚಿಲ ವ್ಯಾಪ್ತಿಯಲ್ಲಿ ಮಳೆ ನೀರು ಹೋಗುವ ಚರಂಡಿಗೆ ತ್ಯಾಜ್ಯ ಎಸೆದ ಗುಜರಿ ಅಂಗಡಿ ಮಾಲೀಕನಿಗೆ 20 ಸಾವಿರ ರೂ. ದಂಡ ವಿಧಿಸಿದ್ದು, ಆ ಮೂಲಕ ಪುರಸಭಾ ಅಧಿಕಾರಿಗಳು ಇಂತಹ ಕೃತ್ಯ ಎಸಗುವ ಇತರರಿಗೂ ಎಚ್ಚರಿಕೆ ನೀಡಿದ್ದಾರೆ.
ಬೀರಿಯಲ್ಲಿರುವ ಎ. ಆರ್. ಟ್ರೇಡರ್ಸ್‌ನ ಮಾಲೀಕ ಸಯ್ಯದ್ ಸಂಶೀರ್ ಎಂಬವರಿಗೆ ದಂಡ ವಿಧಿಸಿರುವುದಾಗಿದೆ.ಸೋಮೇಶ್ವರ ಪುರಸಭಾ ವ್ಯಾಪ್ತಿಗೆ ಸಂಬಂಧಿಸಿದ ಹಾಗೆ ಸುಮಾರು 15 ಕಡೆಗಳಲ್ಲಿ ಈಗಾಗಲೇ ಸಿಸಿಟಿವಿ ಅಳವಡಿಕೆ ಮಾಡಲಾಗಿದ್ದು, ಬೇಕಾಬಿಟ್ಟಿ ತ್ಯಾಜ್ಯ ಎಸೆಯುವವರ ಮೇಲೆ ನಿಗಾ ಇರಿಸಲಾಗಿದೆ.
ಸಾರ್ವಜನಿಕ ಪ್ರದೇಶಗಳಲ್ಲಿ ಎಲ್ಲೆಂದರಲ್ಲಿ ತ್ಯಾಜ್ಯ ವಿಲೇವಾರಿ ಮಾಡುವ ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮದ ಎಚ್ಚರಿಕೆಯನ್ನೂ ಪುರಸಭೆ ನೀಡಿದೆ.
























