ಹೈದರಾಬಾದ್: ಇನ್ಸ್ಟಾಗ್ರಾಮಿನಲ್ಲಿ ಪರಿಚಯವಾಗಿ, ಪ್ರೀತಿಸಿದ ಹುಡುಗನನ್ನು ಮದುವೆಯಾಗಲು ಸಮ್ಮತಿಸದ ಹೆತ್ತವರ ಜೀವವನ್ನೇ ಪಾಪಿ ಪುತ್ರಿಯೊಬ್ಬಳು ತೆಗೆದ ಘಟನೆ ನಡೆದಿದೆ.
ಆರೋಪಿಯನ್ನು ಸುರೇಖಾ ಎಂದು ಗುರುತಿಸಲಾಗಿದೆ. ನಕ್ಕಲಿ ದಶರಥಂ(59) ಮತ್ತು ಲಕ್ಷ್ಮೀ (54) ಎಂಬವರೇ ಮಗಳ ಕ್ರೂರತೆಗೆ ಬಲಿಯಾದ ನತದೃಷ್ಟ ಹೆತ್ತವರು.
ಖಾಸಗಿ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ಸುರೇಖಾ ಸೋಷಿಯಲ್ ಮೀಡಿಯಾದಲ್ಲಿ ಪರಿಚಯವಾದ ಒಬ್ಬ ಯುವಕನನ್ನು ಪ್ರೀತಿಸುತ್ತಿದ್ದಳು. ಅವನನ್ನು ಮದುವೆಯಾಗುವುದಾಗಿ ಮನೆಯಲ್ಲಿ ಹೇಳಿದ್ದು, ಈ ವೇಳೆ ಹೆತ್ತವರು ವಿರೋಧಿಸಿದ್ದಾರೆ. ಇದರಿಂದ ಕೋಪಗೊಂಡ ಆಕೆ ಮೋಸದಿಂದ ಅವರಿಗೆ ಹೆಚ್ಚಿನ ಡೋಸೇಜ್ ಅರಿವಳಿಕೆ ಇಂಜೆಕ್ಷನ್ ನೀಡಿ ಕೊಲೆ ನಡೆಸಿದ್ದಾಳೆ.
ಬಹು ಕಾಲದಿಂದ ಕಾಲು ನೋವು ಎಂದು ಹೇಳುತ್ತಿದ್ದ ತಾಯಿಗೆ ನಿದ್ದೆ ಬರಲು ಮದ್ದು ನೀಡುವುದಾಗಿ ತಿಳಿಸಿ, ಅವರಿಗೆ ಹೆಚ್ಚಿನ ಪ್ರಮಾಣದಲ್ಲಿ ಅರಿವಳಿಕೆ ನೀಡಿದ್ದಾಳೆ. ಹಾಗೆಯೇ ಕೃಷಿಕ ತಂದೆ ಕೆಲಸ ಮಾಡಿ ದಣಿದು ಬಂದಾಗ ಅವರಿಗೂ ಅದೇ ಇಂಜೆಕ್ಷನ್ ಹೈ ಡೋಸ್ ನೀಡಿ ಕೊಂದಿದ್ದಾಳೆ. ಮಾರನೇ ದಿನ ಹೆತ್ತವರು ಮೃತಪಟ್ಟಿರುವುದಾಗಿ ನಾಟಕವಾಡಿದ ಆರೋಪಿ ತನ್ನ ಸಹೋದರನಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾಳೆ. ಆತ ಬಂದು ಅವರನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದು, ಅಲ್ಲಿ ಅವರಿಬ್ಬರೂ ಅರಿವಳಿಕೆ ಮದ್ದು ಹೆಚ್ಚು ಪ್ರಮಾಣದಲ್ಲಿ ತೆಗೆದುಕೊಂಡ ಕಾರಣ ಮೃತಪಟ್ಟಿದ್ದಾಗಿ ಹೇಳಿದ್ದಾರೆ.
ಸಂದೇಹಗೊಂಡ ಸಹೋದರ ಪೊಲೀಸರಿಗೆ ದೂರು ನೀಡಿದ್ದಾನೆ. ಪೊಲೀಸರು ಸುರೇಖಾನನ್ನು ಬಂಧಿಸಿ ವಿಚಾರಣೆ ನಡೆಸಿದ್ದು ಈ ವೇಳೆ ಆಕೆ ತಪ್ಪೊಪ್ಪಿಕೊಂಡಿದ್ದಾಳೆ. ಸದ್ಯ ಆರೋಪಿ ನ್ಯಾಯಾಂಗ ಬಂಧನದಲ್ಲಿದ್ದಾಳೆ.
























