ಯದ್ವಾತದ್ವಾ ಕಾರು ಓಡಿಸಿ ಹಲವು ವಾಹನಗಳಿಗೆ ಗುದ್ದಿದ ನಟ
ಬೆಂಗಳೂರು: ಕನ್ನಡದ ನಟನೊಬ್ಬ ಪಾನಮತ್ತನಾಗಿ ಯದ್ವಾತದ್ವಾ ಕಾರು ಚಲಾಯಿಸಿ ಸರಣಿ ಅಪಘಾತ ಎಸಗಿದ ಘಟನೆ ನಿನ್ನೆ ರಾತ್ರಿ ಸಂಭವಿಸಿದೆ. ಕೆಲವು ಚಿತ್ರಗಳಲ್ಲಿ ಹೀರೊ ಆಗಿ ನಟಿಸಿದ್ದ ಮಯೂರ್ ಪಟೇಲ್ ಎಂಬಾತ ಶರಾಬಿನ ಮತ್ತಿನಲ್ಲಿ ಫಾರ್ಚೂನರ್ ಕಾರನ್ನು ವೇಗವಾಗಿ ಓಡಿಸಿ ನಿಂತಿದ್ದ ಕಾರುಗಳಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಸಂಬಂಧ ಮಯೂರ್ ಪಟೇಲ್ ಮೇಲೆ ಪ್ರಕರಣ ದಾಖಲಾಗಿದೆ.
ಬೆಂಗಳೂರಿನ ದೊಮ್ಮಲೂರು ಬಳಿಯ ಕಮಾಂಡೋ ಆಸ್ಪತ್ರೆ ಬಳಿ ಸರಣಿ ಅಪಘಾತ ನಡೆದಿದೆ. ಅವರ ಕಾರು ಗುದ್ದಿದ ರಭಸಕ್ಕೆ ಶ್ರೀನಿವಾಸ್, ಅಭಿಷೇಕ್ ಎಂಬುವರ ಕಾರುಗಳು ಹಾಗೂ ಸರ್ಕಾರಿ ವಾಹನ ಜಖಂ ಆಗಿದೆ. ಅಲ್ಲೇ ಇದ್ದವರು ಕಂಟ್ರೋಲ್ ರೂಮ್ಗೆ ಕರೆ ಮಾಡಿ ಮಾಹಿತಿ ನೀಡಿದ್ದಾರೆ. ಹೊಯ್ಸಳ ಪೊಲೀಸರು ಮಯೂರ್ ಪಟೇಲ್ನನ್ನು ಠಾಣೆಗೆ ಕರೆದೊಯ್ದು ತಪಾಸಣೆ ಮಾಡಿದಾಗ ಶರಾಬು ಸೇವಿಸಿರುವುದು ದೃಢಪಟ್ಟಿದೆ.
ಅಪಘಾತದ ಕುರಿತು ಶ್ರೀನಿವಾಸ್ ನೀಡಿದ ದೂರಿನ ಮೇರೆಗೆ ಹಲಸೂರು ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಯೂರ್ ಪಟೇಲ್ ಕಾರ್ ಸೀಜ್ ಮಾಡಲಾಗಿದೆ. ಅಪಘಾತದ ವೇಳೆ ಮಯೂರ್ ಪಟೇಲ್ ಕಾರಿಗೆ ಇನ್ಶೂರೆನ್ಸ್ ಇಲ್ಲದಿರುವುದು ಪತ್ತೆಯಾಗಿದೆ. ಅಪಘಾತ ಆಗುತ್ತಿದ್ದಂತೆ ಕಾರಿನಿಂದ ಇಳಿದ ಮಯೂರ್ ಪಟೇಲ್, ಏನೇ ಇದ್ದರೂ ನಾನು ಮಾಡಿಸಿಕೊಡ್ತೀನಿ ಎಂದು ಹೇಳುತ್ತಿರುವುದು ವಿಡಿಯೋದಲ್ಲಿ ಕಂಡು ಬಂದಿದೆ.
























