ಗಣರಾಜ್ಯೋತ್ಸವಕ್ಕೆ ವಂದೇ ಮಾತರಂಗೆ 150 ವರ್ಷ, ಆಪರೇಷನ್ ಸಿಂದೂರ ಸ್ಪರ್ಶ
ನವದೆಹಲಿ : 77ನೇ ಗಣರಾಜ್ಯೋತ್ಸವ ಆಚರಿಸಲು ನವದೆಹಲಿಯ ಕರ್ತವ್ಯಪಥ ಕೂಡ ಸಿದ್ಧವಾಗಿದೆ. ಈ ಬಾರಿ ಗಣರಾಜ್ಯೋತ್ಸವ ಆಚರಣೆ ‘ವಂದೇ ಮಾತರಂಗೆ 150 ವರ್ಷಗಳು’ ಎಂಬ ವಿಷಯದ ಮೇಲೆ ನಡೆಯಲಿದೆ. 1875ರಲ್ಲಿ ಬಂಕಿಮ ಚಂದ್ರ ಚಟ್ಟೋಪಾಧ್ಯಾಯ ವಿರಚಿತ ವಂದೇ ಮಾತರಂಗೆ ಇದೀಗ 150 ವರ್ಷಗಳ ಸಂಭ್ರಮ. ಈ ಹಿನ್ನೆಲೆಯಲ್ಲಿ ಈ ಬಾರಿಯ ಗಣರಾಜ್ಯೋತ್ಸವದಲ್ಲಿ ವಂದೇ ಮಾತರಂನಿಂದ ಪ್ರೇರಿತವಾದ ಸಾಂಸ್ಕೃತಿಕ ಹಾಗೂ ಪ್ರದರ್ಶನಗಳು ಪಾಲ್ಗೊಳ್ಳಲು ಸೂಚಿಸಲಾಗಿದೆ.
ಇದೇ ಮೊದಲ ಬಾರಿಗೆ ಗಣರಾಜ್ಯೋತ್ಸವದ ಪಥ ಸಂಚಲನದಲ್ಲಿ ಭಾರತೀಯ ಸೇನೆಯು ಬ್ಯಾಟಲ್ ಅರೇ (ಯುದ್ಧ ಶ್ರೇಣಿ) ಪ್ರದರ್ಶಿಸಲಿದೆ. ಈ ವೇಳೆ ಮಿಲಿಟರಿ ಪ್ರದರ್ಶನ, ಆಧುನಿಕ ಶಸ್ತ್ರಾಸ್ತ್ರ, ಡ್ರೋನ್, ಟ್ಯಾಂಕರ್ ಗಳು ಮತ್ತು ಕ್ಷಿಪಣಿ ಸೇರಿದಂತೆ ಇನ್ನಿತರ ರಚನೆಯನ್ನು ಪ್ರದರ್ಶಿಸಲಿದೆ. ಜೊತೆಗೆ ಭಾರತೀಯ ಸೇನೆಯ ವಿವಿಧ ರಚನೆಯ ವಿಮಾನಗಳು ಮತ್ತು ಹೆಲಿಕ್ಯಾಪ್ಟರ್‌ಗಳು ಕೂಡ ಪಾಲ್ಗೊಳ್ಳಲಿವೆ. ಭಾರತೀಯ ವಾಯುಪಡೆಯ ವಿಶೇಷ ನಿವೃತ್ತ ಸೈನಿಕರ ಟ್ಯಾಬ್ಲೋ ಕೂಡ ಇದರ ಭಾಗವಾಗಲಿದೆ.
ಬೆಳಗ್ಗೆ 10.05ಕ್ಕೆ ನ್ಯಾಷನಲ್ ವಾರ್ ಮೆಮೋರಿಯಲ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ ಯೋಧರಿಗೆ ನಮನ ಸಲ್ಲಿಸುವುದರೊಂದಿಗೆ ಗಣರಾಜ್ಯೋತ್ಸವ ಕಾರ್ಯಕ್ರಮಗಳು ಪ್ರಾರಂಭವಾಗಲಿವೆ. ಬೆಳಗ್ಗೆ 10.31ಕ್ಕೆ ಕರ್ತವ್ಯಪಥದಲ್ಲಿ ಭವ್ಯ ಗಣರಾಜ್ಯೋತ್ಸವ ಪರೇಡ್ ಆರಂಭವಾಗಲಿದೆ. ಯುರೋಪಿಯನ್ ಕೌನ್ಸಿಲ್ ಅಧ್ಯಕ್ಷ ಆಂಟೋನಿಯೋ ಕೋಸ್ಟಾ ಮತ್ತು ಯುರೋಪಿಯನ್ ಆಯೋಗದ ಅಧ್ಯಕ್ಷೆ ಉರ್ಸುಲಾ ವಾನ್ ಡೆರ್ ಲೇಯನ್ ಗಣರಾಜ್ಯೋತ್ಸವದ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಈ ಬಾರಿಯ ಪಥಸಂಚಲನದಲ್ಲಿ ಆಪರೇಷನ್ ಸಿಂಧೂರ್ ರಚನೆಯನ್ನು ವಾಯುಪಡೆ ಪ್ರದರ್ಶಿಸಲಿದೆ. ‘ಆಪರೇಷನ್ ಸಿಂಧೂರ್’ನಲ್ಲಿ ಭಾಗವಹಿಸಿದ್ದ ಯುದ್ಧ ವಿಮಾನಗಳು ಆಕಾಶದಲ್ಲಿ ಹಾರಾಡಿ ವಾಯುಪಡೆಯ ಶಕ್ತಿ ತೋರಿಸಲಿವೆ. ಇದರಲ್ಲಿ ಎರಡು ರಫೇಲ್ ಜೆಟ್‌ಗಳು, ಎರಡು Su-30 ವಿಮಾನಗಳು, ಎರಡು MiG-29 ಯುದ್ಧ ವಿಮಾನಗಳು ಮತ್ತು ಒಂದು ಜಾಗ್ವಾರ್ ಯುದ್ಧ ವಿಮಾನ ಸೇರಿವೆ. ಪಥಸಂಚಲನದಲ್ಲಿ 30 ಸ್ತಬ್ಧಚಿತ್ರಗಳು ಪಾಲ್ಗೊಳ್ಳಲಿವೆ. ‘ಸ್ವಾತಂತ್ರ್ಯದ ಮಂತ್ರ, ವಂದೇ ಮಾತರಂ’ ಮತ್ತು ‘ಸಮೃದ್ಧಿಯ ಮಂತ್ರ, ಆತ್ಮನಿರ್ಭರ ಭಾರತ’ ಎಂಬುದು ಈ ಬಾರಿಯ ಮುಖ್ಯ ಥೀಮ್‌ಗಳಾಗಿವೆ. ಜೊತೆಗೆ 2,500 ಸಾಂಸ್ಕೃತಿಕ ಕಲಾವಿದರು ಕರ್ತವ್ಯ ಪಥದಲ್ಲಿ ವಂದೇ ಮಾತರಂ ಮತ್ತು ಸ್ವಾವಲಂಬಿ, ಅಭಿವೃದ್ಧಿ ಹೊಂದಿದ ಭಾರತದ ಪರಿಕಲ್ಪನೆಯ ಬಗ್ಗೆ ಪ್ರದರ್ಶನ ನೀಡಲಿದ್ದಾರೆ.
ಮೂವತ್ತು ಸ್ತಬ್ಧಚಿತ್ರಗಳ ಪೈಕಿ 17 ಸ್ತಬ್ಧಚಿತ್ರಗಳು ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಮತ್ತು 13 ಸ್ತಬ್ಧಚಿತ್ರಗಳು ಕೇಂದ್ರದ ವಿವಿಧ ಸಚಿವಾಲಯಗಳಿಂದ ಇರಲಿವೆ. ಭಾರತೀಯ ವಾಯುಪಡೆಯ ಮಾಜಿ ಸೈನಿಕರನ್ನು ಒಳಗೊಂಡ ವಿಶೇಷ ಸ್ತಬ್ಧಚಿತ್ರವೂ ಇದರಲ್ಲಿ ಪ್ರದರ್ಶಿಸಲಿವೆ.
ಸಾಂಪ್ರದಾಯಿಕ ಧ್ವಜಾರೋಹಣ, ರಾಷ್ಟ್ರಗೀತೆ ಮತ್ತು ಸ್ವದೇಶಿ 105 MM ಲೈಟ್ ಫೀಲ್ಡ್ ಗನ್‌ಗಳನ್ನು ಬಳಸಿ 21-ಸುತ್ತಿನ ಕುಶಾಲತೋಪು ಮೂಲಕ ಕಾರ್ಯಕ್ರಮ ಆರಂಭವಾಗಲಿದೆ. ವಿವಿಧ ಕ್ಷೇತ್ರಗಳಿಂದ ಬಂದ ಸುಮಾರು 10,000 ವಿಶೇಷ ಅತಿಥಿಗಳು ಗಣರಾಜ್ಯೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ವಿಶ್ವ ಅಥ್ಲೆಟಿಕ್ ಪಾರಾ ಚಾಂಪಿಯನ್‌ಶಿಪ್ ವಿಜೇತರು, ಕೃಷಿಕರು, ಭಾಗವಹಿಸಲಿದ್ದಾರೆ. ಇದೇ ಸಂದರ್ಭದಲ್ಲಿ, ಗಗನಯಾನ, ಚಂದ್ರಯಾನದಂತಹ ಇತ್ತೀಚಿನ ಇಸ್ರೋ ಯೋಜನೆಗಳಲ್ಲಿ ಭಾಗವಹಿಸಿದ ಅತ್ಯುತ್ತಮ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರು, ಹಾಗೂ ಹೈಡ್ರೋಜನ್ ಉತ್ಪಾದನೆಗೆ ಪ್ರೋತ್ಸಾಹಧನ ಪಡೆದ ಕಂಪನಿಗಳ ಮುಖ್ಯಸ್ಥರು, ಸಿಇಒಗಳನ್ನೂ ಗೌರವ ಅತಿಥಿಗಳಾಗಿ ಆಹ್ವಾನಿಸಲಾಗಿದೆ. ದೆಹಲಿಯಲ್ಲಿ ಹೆಜ್ಜೆಹೆಜ್ಜೆಗೂ ಕಣ್ಗಾವಲು ಇರಿಸಲಾಗಿದೆ.
ವಿಶೇಷ ಗೂಗಲ್ ಡೂಡಲ್
77ನೇ ಗಣರಾಜ್ಯೋತ್ಸವದ ಸ್ಮರಣಾರ್ಥವಾಗಿ ಗೂಗಲ್ ಡೂಡಲ್ ವಿಶೇಷ ಗೌರವ ಸಲ್ಲಿಸಿದೆ. ಈ ಎನಿಮೆಟೆಡ್ ಡೂಡಲ್‍ನಲ್ಲಿ ರಾಷ್ಟ್ರದ ಹೆಮ್ಮೆಯನ್ನು ಪ್ರತಿಬಿಂಬಿಸುವ ಅಂಶಗಳನ್ನು ಪ್ರದರ್ಶಿಸಲಾಗಿದೆ. ಗೂಗಲ್ ಸರ್ಚ್ ಇಂಜಿನ್‍ನ ಎಲ್ಲ ಅಕ್ಷರಗಳು ಗಣರಾಜ್ಯೋತ್ಸವದ ನಿಮಿತ್ತ ವಿಶಿಷ್ಟ ವಿನ್ಯಾಸವನ್ನು ಒಳಗೊಂಡಿವೆ. ರಾಕೆಟ್ ಉಡಾವಣೆ, ಟೆಕ್, ಬಾಹ್ಯಾಕಾಶ, ಕ್ರಿಕೆಟ್ ಸೇರಿದಂತೆ ಭಾರತದ ಭಾರತದ ಸಾಧನೆಗಳನ್ನ ಪ್ರತಿಬಿಂಬಿಸುವ ಚಿತ್ರವನ್ನ ಒಳಗೊಂಡಿದೆ. ಇದೆಲ್ಲ ರಾಷ್ಟ್ರಧ್ವಜದ ಬಣ್ಣಗಳಲ್ಲಿ ಗೂಗಲ್ ಡೂಡಲ್‍ನಲ್ಲಿ ಹಾಕಲಾಗಿದೆ.
























