ದಟ್ಟ ಅರಣ್ಯದ ಘಾಟ್‌ನಲ್ಲಿ ನಡೆದ ಸಿನಿಮೀಯ ಶೈಲಿಯ ದರೋಡೆ ಕೃತ್ಯ ; ಮೂರು ರಾಜ್ಯಗಳ ಪೊಲೀಸರಿಂದ ತನಿಖೆ
ಬೆಳಗಾವಿ: ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸುತ್ತಿದ್ದ 400 ಕೋಟಿ ರೂಪಾಯಿಗೂ ಅಧಿಕ ಮೌಲ್ಯದ ನಿಷೇಧಿತ 2,000 ರೂ. ಮುಖಬೆಲೆಯ ನೋಟುಗಳಿದ್ದ ಎರಡು ಕಂಟೇನರ್‌ಗಳನ್ನು ಬೆಳಗಾವಿಯ ಚೋರ್ಲಾ ಘಾಟ್‌ನಲ್ಲಿ ಹೈಜಾಕ್ ಮಾಡಲಾಗಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. ಈ ದರೋಡೆ ಪ್ರಕರಣ ಅಂತಾರಾಜ್ಯ ಮಟ್ಟದ್ದಾಗಿದ್ದು, ಕರ್ನಾಟಕ, ಗೋವಾ ಹಾಗೂ ಮಹಾರಾಷ್ಟ್ರ 3 ರಾಜ್ಯಗಳ ಪೊಲೀಸರು ವಿಶೇಷ ತನಿಖಾ ತಂಡದ ಮೂಲಕ ತನಿಖೆ ನಡೆಸುತ್ತಿದ್ದಾರೆ.
ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗಿಸಲಾಗುತ್ತಿದ್ದ ಸುಮಾರು 400 ಕೋಟಿ ರೂ. ನಗದು ತುಂಬಿದ್ದ ಎರಡು ಕಂಟೇನರ್‌ಗಳು ಬೆಳಗಾವಿ ಜಿಲ್ಲೆಯ ಖಾನಾಪುರ ತಾಲೂಕಿನ ಚೋರ್ಲಾ ಘಾಟ್ ಪ್ರದೇಶದಲ್ಲಿ ಹೈಜಾಕ್ ಆಗಿರುವುದು ತಡವಾಗಿ ಬೆಳಕಿಗೆ ಬಂದಿದೆ. 2025ರ ಅಕ್ಟೋಬರ್ 16ರಂದು ಈ ದರೋಡೆ ನಡೆದಿದೆ. ಘಟನೆ ನಡೆದು ಹಲವಾರು ತಿಂಗಳ ನಂತರ ಪ್ರಕರಣ ಬೆಳಕಿಗೆ ಬಂದಿರುವುದು ಮೂರು ರಾಜ್ಯಗಳ ಪೊಲೀಸರಲ್ಲಿ ತೀವ್ರ ಅಚ್ಚರಿ ಉಂಟುಮಾಡಿದೆ. ಜೊತೆಗೆ ಅನೇಕ ಅನುಮಾನಗಳಿಗೆ ಕಾರಣವಾಗಿದೆ.
ಭಾರಿ ಮೊತ್ತದ ಹಣವು ಮಹಾರಾಷ್ಟ್ರದ ಖ್ಯಾತ ರಿಯಲ್ ಎಸ್ಟೇಟ್ ಉದ್ಯಮಿ ಕಿಶೋರ್ ಶೇಟ್ ಎಂಬವರಿಗೆ ಸೇರಿದ್ದು ಎಂಬುದು ಮಹಾರಾಷ್ಟ್ರ ಪೊಲೀಸ್ ಮೂಲಗಳಿಂದ ಗೊತ್ತಾಗಿದೆ. ಗೋವಾದಿಂದ ಮಹಾರಾಷ್ಟ್ರಕ್ಕೆ ಸಾಗುತ್ತಿದ್ದ 2 ಕಂಟೇನರ್‌ಗಳು, ಖಾನಾಪುರ ತಾಲೂಕಿನ ಅಪಾಯಕಾರಿ ಹಾಗೂ ಅರಣ್ಯ ಪ್ರದೇಶವಾದ ಚೋರ್ಲಾ ಘಾಟ್ ಮಾರ್ಗದಲ್ಲಿ ಏಕಾಏಕಿ ನಾಪತ್ತೆಯಾಗಿವೆ. ಈ ಕಂಟೇನರ್‌ಗಳಲ್ಲಿ 400 ಕೋಟಿ ರೂ.ಗಿಂತಲೂ ಅಧಿಕ ನಗದು ಹಣ ಸಾಗಿಸಲಾಗುತ್ತಿತ್ತು ಎಂಬ ಮಾಹಿತಿ ಇದೀಗ ಅಧಿಕೃತ ದಾಖಲೆಗಳಲ್ಲಿ ಉಲ್ಲೇಖವಾಗಿದೆ.
ಕಂಟೇನರ್ ಹೈಜಾಕ್ ಪ್ರಕರಣ ನಡೆದ ಕೆಲ ದಿನಗಳ ಬಳಿಕ, ನಾಸಿಕ್ ಮೂಲದ ಸಂದೀಪ್ ಪಾಟೀಲ ಎಂಬಾತನನ್ನು ಕಿಶೋರ್ ಶೇಟ್ ಸಹಚರರು ಗನ್ ಪಾಯಿಂಟ್‌ನಲ್ಲಿ ಅಪಹರಿಸಿದ್ದರು. ನಂತರ ಸಂದೀಪ್‌ನನ್ನು ಸುಮಾರು ಒಂದೂವರೆ ತಿಂಗಳ ಕಾಲ ಅಕ್ರಮ ಬಂಧನದಲ್ಲಿಟ್ಟು, ಕಂಟೇನರ್ ಹೈಜಾಕ್‌ಗೆ ನೀನೇ ಕಾರಣ ಅಂತ ಚಿತ್ರಹಿಂಸೆ ಕೊಟ್ಟಿದ್ದರು.
400 ಕೋಟಿ ಹಣ ಕೊಡದಿದ್ದರೆ ಜೀವ ಉಳಿಯುವುದಿಲ್ಲ ಎಂದು ಬೆದರಿಕೆ ಹಾಕಿ, ಮಾನಸಿಕ ಹಾಗೂ ದೈಹಿಕ ಚಿತ್ರಹಿಂಸೆ ನೀಡಿದ್ದರು. ನಂತರ ಅಪಹರಣಕಾರರಿಂದ ತಪ್ಪಿಸಿಕೊಂಡ ಸಂದೀಪ್ ಪಾಟೀಲ, ಮಹಾರಾಷ್ಟ್ರದ ನಾಸಿಕ್ ಪೊಲೀಸ್ ಠಾಣೆಗೆ ತೆರಳಿ 2026, ಜ.1ರಂದು ದೂರು ದಾಖಲಿಸಿದ್ದಾನೆ. ಈ ದೂರಿನಲ್ಲಿ 400 ಕೋಟಿ ರೂ. ನಗದು ಸಾಗಿಸುತ್ತಿದ್ದ ವಾಹನ ಅಪಹರಣದ ಬಗ್ಗೆ ಸ್ಪಷ್ಟವಾಗಿ ಉಲ್ಲೇಖಿಸಿದ್ದಾನೆ. ಜೊತೆಗೆ, ಇದೇ ದೂರಿನ ಆಧಾರದಲ್ಲಿ ಈವರೆಗೂ ಗುಪ್ತವಾಗಿದ್ದ ಕಂಟೇನರ್ ಹೈಜಾಕ್ ಪ್ರಕರಣ ಸಂಪೂರ್ಣ ಬಹಿರಂಗವಾಗಿದೆ. ತಕ್ಷಣ ಮಹಾರಾಷ್ಟ್ರ ಪೊಲೀಸರು ತಕ್ಷಣ ಕಾರ್ಯಾಚರಣೆ ಆರಂಭಿಸಿ, ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಇನ್ನೂ ಇಬ್ಬರು ಪ್ರಮುಖ ಆರೋಪಿಗಳು ಪರಾರಿಯಾಗಿದ್ದು, ಅವರ ಬಂಧನಕ್ಕಾಗಿ ವಿವಿಧ ರಾಜ್ಯಗಳಲ್ಲಿ ಶೋಧ ಕಾರ್ಯ ನಡೆಸುತ್ತಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ, ಉಳಿದ ಇಬ್ಬರ ಬಂಧನವಾದ ಬಳಿಕವೇ ಕಂಟೇನರ್‌ಗಳು ಹಾಗೂ ಹಣ ಪತ್ತೆಯಾಗುವ ಸಾಧ್ಯತೆ ಇದೆ.
ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಎಸ್‌ಐಟಿ ರಚಿಸಿ ಆದೇಶ ಹೊರಡಿಸಿದ್ದಾರೆ. ಎಲ್ಲ ಆಯಾಮಗಳಲ್ಲಿ ತನಿಖೆ ನಡೆಸುವಂತೆ ಸೂಚಿಸಿದ್ದಾರೆ. ಇತ್ತೀಚೆಗೆ ಮಹಾರಾಷ್ಟ್ರದಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಈ ಹಣ ಬಳಕೆ ಆಗಿರುವ ಸಾಧ್ಯತೆಯೂ ಇದೆ ಅನ್ನೋ ಅನುಮಾನ ದಟ್ಟವಾಗಿದೆ.
























