ಮಂಗಳೂರು: ತಮ್ಮ ಬೈಗುಳಗಳ ಮೂಲಕವೇ ಸಾಮಾಜಿಕ ಜಾಲತಾಣಗಳಲ್ಲಿ ಹಾಸ್ಯ ಚಟಾಕಿ ಹಾರಿಸಿ ಜನರಿಗೆ ಮನರಂಜನೆ ನೀಡುತ್ತಿದ್ದ ಮಂಗಳೂರಿನ ಪ್ರಸಿದ್ಧ ರೀಲ್ಸ್ ರಾಣಿ ಆಶಾ ಪಂಡಿತ್ ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ಅಳಪೆ ಸಮೀಪ ಸಣ್ಣ ಕ್ಯಾಂಟಿನ್ ನಡೆಸಿಕೊಂಡು ಸ್ವಾಭಿಮಾನದ ಬದುಕು ಕಟ್ಟಿಕೊಂಡಿದ್ದ ಅವರು ಜನರ ಮನದಲ್ಲಿ ಆಶಾಕ್ಕ ಎಂದೇ ಫೇಮಸ್ ಆಗಿದ್ದರು. ತಮ್ಮ ಕಾಮಿಡಿ ರೀಲ್ಸ್‌ಗಳ ಮೂಲಕವೇ ಸಾವಿರಾರು ಅಭಿಮಾನಿಗಳನ್ನು ಸಂಪಾದಿಸಿದ್ದರು.
ನಿನ್ನೆ ರಾತ್ರಿ ವೇಳೆ ಅವರಿಗೆ ವಾಂತಿಯಾಗಿತ್ತು. ಇಂದು ಬೆಳಗ್ಗೆ ಹೃದಯಾಘಾತಕ್ಕೆ ತುತ್ತಾಗಿ ಮನೆಯ ಅಂಗಳದಲ್ಲಿ ಬಿದ್ದಿದ್ದರು. ಕೂಡಲೇ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತಾದರೂ, ಅದಾಗಲೇ ಅವರು ಮೃತಪಟ್ಟಿದ್ದರು ಎಂದು ಕುಟುಂಬದ ಮೂಲಗಳು ತಿಳಿಸಿವೆ.
























