ಮದುವೆಯಾಗುವುದಾಗಿ ಹೇಳಿದ್ದಕ್ಕೆ ‌ನಾಮಕರಣ ಮುಂದೂಡಿಕೆ: ಪ್ರತಿಭಾ ಕುಳಾಯಿ

ಪುತ್ತೂರು: ಇಡೀ ರಾಜ್ಯದೆಲ್ಲೆಡೆ ‌ಸುದ್ದಿಯಾಗಿದ್ದ ಲವ್, ಸೆಕ್ಸ್, ಮಗು ಕೊಟ್ಟು ಮದುವೆಯಾಗದೆ ಯುವತಿಗೆ ‌ವಂಚಿಸಿದ ಆರೋಪಿ ಕೃಷ್ಣ ಜೆ. ರಾವ್ ಮದುವೆಗೆ ಒಪ್ಪಿದ್ದಾನೆ ಎಂಬ ಕಾರಣಕ್ಕೆ ಆ ಮಗುವಿನ ನಾಮಕರಣ ಕಾರ್ಯಕ್ರಮವನ್ನು ಫೆ. 7 ಕ್ಕೆ ಮುಂದೂಡಿರುವುದಾಗಿ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.

ಜ. 24 ಕ್ಕೆ ನಾಮಕರಣ ಕಾರ್ಯಕ್ರಮ ನಡೆಯಬೇಕಿತ್ತು. ಆದರೆ ಅವರಾಗಿಯೇ ಮದುವೆಯಾಗುವುದಾಗಿ ಹೇಳಿ ಈಗ ಮುಂದೆ ಬಂದಿದ್ದಾರೆ. ಜ. 31 ರ ಒಳಗಾಗಿ ಕೃಷ್ಣ ಸಂತ್ರಸ್ತೆಯನ್ನು ಮದುವೆಯಾಗಬೇಕು ಎಂದು ಪ್ರತಿಭಾ ಹೇಳಿದ್ದಾರೆ.

ಸಂತ್ರಸ್ತೆಯ ‌ತಾಯಿಗೆ ಮಧು ಆಚಾರ್ಯ ಎಂಬವರು ಕರೆ ಮಾಡಿದ್ದು, ಈ ಮದುವೆ ಮಾಡುವಂತೆ ಹುಡುಗನ ತಂದೆಯಲ್ಲಿ ಹೇಳಲಾಗಿದೆ. ಅವರು ಮದುವೆಗೆ ಸಮ್ಮತಿಸಿದ್ದಾರೆ. ಸ್ವಲ್ಪ ಕಾಲಾವಕಾಶ ನೀಡುವಂತೆ ಕೇಳುತ್ತಾರೆ ಎಂದು ಹೇಳಿದ್ದಾಗಿಯೂ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.





















































 
 

ಸಂಧಾನಕ್ಕೆ ಸಂತ್ರಸ್ತೆ ಮತ್ತು ಆಕೆಯ ತಾಯಿ ಮಾತ್ರ ಬರಬೇಕು ಎಂದು ಆರೋಪಿಯ ಕಡೆಯವರು ತಿಳಿಸಿದ್ದಾರೆ. ಆದರೆ ಸಂತ್ರಸ್ತರಿಗೆ ಜೀವ ಬೆದರಿಕೆ ಈ ಮೊದಲೇ ಇದ್ದು ಮನೆಯ ಸುತ್ತಲೂ ಸಿಸಿಟಿವಿ ಅಳವಡಿಸಲಾಗಿದೆ. ಆದ್ದರಿಂದ ಪುತ್ತೂರು ಠಾಣೆ ಅಥವಾ ಮಂಗಳೂರು ಪೊಲೀಸ್ ಕಮಿಷನರ್ ಕಚೇರಿಯಲ್ಲಿ ದಿನ ನಿಗದಿ ಮಾಡಿ ಮಾತುಕತೆ ನಡೆಸಲಿ. ಅಲ್ಲದೆ ಅವರಿಬ್ಬರೇ ಆರೋಪಿಯ ಮನೆಯವರು ಹೇಳಿದಲ್ಲೇ ಹೋಗಲು ಭಯವಿದೆ ಎಂದು ಕುಳಾಯಿ ತಿಳಿಸಿದ್ದಾರೆ.

ಈ ಹಿಂದೆಯೂ ಸಂಧಾನದ ಮಾತುಕತೆ ಮಾಡಿ ಸಾವಿರಾರು ಕಂಡೀಷನ್ಸ್‌ಗಳನ್ನು ಆರೋಪಿಯ ಕಡೆಯವರು ಹಾಕಿದ್ದಾರೆ. ಆದರೆ ಇನ್ನು ಮುಂದೆ ಅದಕ್ಕೆ ಆಸ್ಪದ ಇಲ್ಲ. ಆದ್ದರಿಂದ ಅವರ ಮಾತಿನಲ್ಲಿ ನಮಗೆ ಸಂಪೂರ್ಣ ನಂಬಿಕೆ ಇಲ್ಲ. ಅದು ನಾಟಕವೂ ಆಗಿರಬಹುದು. ಹಾಗಾಗಿ ಕಾನೂನಾತ್ಮಕ ಹೋರಾಟದಲ್ಲಿ ಯಾವ ಬದಲಾವಣೆಯೂ ಇಲ್ಲ. ಅದು ನಡೆಯುತ್ತದೆ ಎಂದು ತಿಳಿಸಿದ್ದಾರೆ.

ಮದುವೆಯ ಬಳಿಕ ಕಾನೂನಾತ್ಮಕ ಪ್ರಕ್ರಿಯೆಗಳನ್ನು ಎರಡೂ ಕುಟುಂಬಗಳು ಮಾಡಿಕೊಳ್ಳಲಿ. ಈಗ ಇಬ್ಬರೂ ಮಾಡಿದ ತಪ್ಪಿಗೆ ಮದುವೆ ಎನ್ನುವ ಪ್ರಾಯಶ್ಚಿತ ಆಗಬೇಕಾಗಿದೆ. ಹಾಗಾಗಿ ಆರೋಪಿ ಕೃಷ್ಣನಿಗೆ ಜ. 31 ರ ವರೆಗೆ ಮದುವೆಯಾಗಲು ಕಲಾವಕಾಶ ನೀಡಲಾಗಿದೆ ಎಂದಿದ್ದಾರೆ. ಹಾಗೆಯೇ ಸಂತ್ರಸ್ತೆಯ ತಾಯಿ ಅಥವಾ ಕುಟುಂಬ ವರ್ಗ ಯಾವ ಮಾಧ್ಯಮ ಗೋಷ್ಠಿಯನ್ನೂ ನಡೆಸದಂತೆ, ಭಾಗವಹಿಸದಂತೆ ಆರೋಪಿಯ ಕಡೆಯಿಂದ ಕಂಡೀಷನ್ ಇದ್ದು, ಆದ್ದರಿಂದ ಅವರು ಇಂದು ಈ ಗೋಷ್ಠಿಯಲ್ಲಿ ಭಾಗವಹಿಸಿಲ್ಲ. ಆದರೆ ಜ. 31 ರ ಮೊದಲು ಈ ಮದುವೆ ನಡೆಯದೇ ಹೋದಲ್ಲಿ ಆಮೇಲೆ ಯಾರೂ ಈ ವಿಷಯದಲ್ಲಿ ಸಂಧಾನ ಮಾಡುವುದಾಗಿ ನಮ್ಮ ಬಳಿ ಬರಬೇಡಿ. ಆ ಬಳಿಕ ಸಂಧಾನದ ಮಾತೇ ಇಲ್ಲ. ಈಗಾಗಲೇ ಮಗುವಿಗೆ 6 ತಿಂಗಳುಗಳಾಗಿವೆ. ಆ ನಂತರ ನಮ್ಮ ಕಾನೂನಾತ್ಮಕ, ಸಾಮಾಜಿಕ ಹೋರಾಟಗಳು ಮುಂದುವರೆಯುತ್ತವೆ. ಈಗಾಗಲೇ ಸಾಕಷ್ಟು ಸಮಯ ನೀಡಲಾಗಿದೆ. ಸಂತ್ರಸ್ತೆಗೆ ನ್ಯಾಯ ಸಿಗದೇ ಹೋದಲ್ಲಿ ಬೀದಿಗೆ ಇಳಿದು ಹೋರಾಡುವ ಎಚ್ಚರಿಕೆಯನ್ನೂ ಈ ಸಂದರ್ಭದಲ್ಲಿ ಅವರು ನೀಡಿದ್ದಾರೆ.

error: Content is protected !!
Scroll to Top