ನವದೆಹಲಿ: ಅಸಂಖ್ಯಾತ ದಾಖಲೆಗಳನ್ನು ಬಾಹ್ಯಾಕಾಶ ಕ್ಷೇತ್ರದಲ್ಲಿ ಬರೆದ ಭಾರತೀಯ ಮೂಲದ ಗಗನಯಾತ್ರಿ ಸುನೀತಾ ವಿಲಿಯಮ್ಸ್ ಅವರು ತಮ್ಮ 27 ವರ್ಷಗಳ ವೃತ್ತಿ ಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ.
ಡಿ. 27, 2025 ರಂದು ಅವರು ನಿವೃತ್ತರಾಗಿರುವುದಾಗಿ ನಾಸಾ ಘೋಷಿಸಿದೆ. ಸುನೀತಾ ಅವರ ಕೊನೆಯ ಬಾಹ್ಯಾಕಾಶ ಯಾನವು ಅತ್ಯಂತ ರೋಚಕವಾಗಿತ್ತು. ಕೇವಲ 10 ದಿನಗಳ ಮಿಷನ್ ಎಂದು ಜೂನ್ 2024ರಲ್ಲಿ ಬೋಯಿಂಗ್ ಸ್ಟಾರ್‌ಲೈನರ್ ಮೂಲಕ ತೆರಳಿದ್ದ ಅವರು, ತಾಂತ್ರಿಕ ಕಾರಣಗಳಿಂದಾಗಿ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಲ್ಲಿ (ISS) ಬರೋಬ್ಬರಿ ಒಂಬತ್ತುವರೆ ತಿಂಗಳುಗಳ ಕಾಲ ಕಳೆಯಬೇಕಾಯಿತು. ಅಂತಿಮವಾಗಿ ಮಾರ್ಚ್ 2025ರಲ್ಲಿ ಅವರು ಸುರಕ್ಷಿತವಾಗಿ ಭೂಮಿಗೆ ಮರಳಿದ್ದರು.
ಸುನೀತಾ ವಿಲಿಯಮ್ಸ್ ಸಾಧನೆಗಳು:
27 ವರ್ಷಗಳ ವೃತ್ತಿಜೀವನದಲ್ಲಿ 3 ಪ್ರಮುಖ ಮಿಷನ್‌ಗಳ ಮೂಲಕ ಒಟ್ಟು 608 ದಿನಗಳನ್ನು ಬಾಹ್ಯಾಕಾಶದಲ್ಲಿ ಕಳೆದಿದ್ದಾರೆ.
ಸ್ಪೇಸ್‌ವಾಕ್ ದಾಖಲೆ: ಒಟ್ಟು 9 ಬಾರಿ ಬಾಹ್ಯಾಕಾಶ ನಡಿಗೆ (Spacewalk) ಮಾಡಿದ್ದು, ಒಟ್ಟು 62 ಗಂಟೆ 6 ನಿಮಿಷಗಳ ಕಾಲ ನಿಲ್ದಾಣದ ಹೊರಗೆ ಕೆಲಸ ಮಾಡಿದ್ದಾರೆ. ಇದು ಮಹಿಳಾ ಗಗನಯಾತ್ರಿಗಳ ಪಟ್ಟಿಯಲ್ಲಿ ವಿಶ್ವದಾಖಲೆಯಾಗಿದೆ.
ಅಂತರಿಕ್ಷದಲ್ಲಿ ಮ್ಯಾರಥಾನ್: ಬಾಹ್ಯಾಕಾಶದಲ್ಲಿ ಮ್ಯಾರಥಾನ್ ಓಡಿದ ವಿಶ್ವದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯೂ ಇವರದ್ದಾಗಿದೆ.
ಸುನೀತಾ ವಿಲಿಯಮ್ಸ್ ಮಾನವ ಬಾಹ್ಯಾಕಾಶ ಯಾನದ ಹಾದಿ ತೋರಿದ ಮಾರ್ಗದರ್ಶಕಿ. ಅವರ ನಾಯಕತ್ವವು ಚಂದ್ರನತ್ತ ಸಾಗುವ ‘ಆರ್ಟೆಮಿಸ್’ ಮತ್ತು ಮುಂದಿನ ಮಂಗಳ ಗ್ರಹದ ಮಿಷನ್‌ಗಳಿಗೆ ಬಲವಾದ ಅಡಿಪಾಯ ಹಾಕಿದೆ,” ಎಂದು ನಾಸಾ ಆಡಳಿತಾಧಿಕಾರಿ ಜಾರೆಡ್ ಐಸಾಕ್‌ಮ್ಯಾನ್ ಗುಣಗಾನ ಮಾಡಿದ್ದಾರೆ.
ಗುಜರಾತ್ ಮೂಲದ ದೀಪಕ್ ಪಾಂಡ್ಯ ಮತ್ತು ಗ್ಲೋವೇನಿಯನ್ ಮೂಲದ ಬೋನಿ ಪಾಂಡ್ಯ ಅವರ ಪುತ್ರಿಯಾದ ಸುನೀತಾ ಅವರು ಸದಾ ತಮ್ಮ ಭಾರತೀಯ ಬೇರುಗಳ ಬಗ್ಗೆ ಹೆಮ್ಮೆ ಪಡುತ್ತಿದ್ದರು. ಬಾಹ್ಯಾಕಾಶಕ್ಕೆ ಭಗವದ್ಗೀತೆ ಮತ್ತು ಸಮೋಸಾಗಳನ್ನು ಒಯ್ದು ಸುದ್ದಿಯಾಗಿದ್ದರು. ಸದ್ಯ 60 ವರ್ಷ ಪ್ರಾಯದ ಅವರು ಈಗ ನಿವೃತ್ತ ಜೀವನದತ್ತ ಹೆಜ್ಜೆ ಇಟ್ಟಿದ್ದಾರೆ.
ಬಾಹ್ಯಾಕಾಶವೇ ನನಗೆ ಅತ್ಯಂತ ಇಷ್ಟವಾದ ತಾಣ. ನಾಸಾದಲ್ಲಿ ಕಳೆದ 27 ವರ್ಷಗಳು ನನ್ನ ಪಾಲಿಗೆ ಅದ್ಭುತ ಗೌರವ. ನನ್ನ ಸಹೋದ್ಯೋಗಿಗಳ ಪ್ರೀತಿ ಮತ್ತು ಬೆಂಬಲದಿಂದ ಇದು ಸಾಧ್ಯವಾಯಿತು ಎಂದು ಸುನೀತಾ ವಿಲಿಯಮ್ಸ್ ಹೇಳಿದ್ದಾರೆ.
























