ಕಿರಿಯ ವಯಸ್ಸಿನ ಮುಖಂಡನಿಗೆ ದೇಶದ ಅತಿದೊಡ್ಡ ಪಕ್ಷವನ್ನು ಮುನ್ನಡೆಸುವ ಹೊಣೆ
ನವದೆಹಲಿ: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಿತಿನ್ ನಬಿನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಬಿಜೆಪಿ ಹಿರಿಯ ನಾಯಕ ಮತ್ತು ಚುನಾವಣಾಧಿಕಾರಿ ಕೆ.ಲಕ್ಷ್ಮಣ್ ಸೋಮವಾರ ಪ್ರಕಟಿಸಿದ್ದಾರೆ. ಇತ್ತೀಚಿಗಷ್ಟೇ ರಾಷ್ಟ್ರೀಯ ಕಾರ್ಯಕಾರಿ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಿಹಾರd ಬಿಜೆಪಿ ಶಾಸಕ ನಿತಿನ್ ನಬಿನ್ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ನಿನ್ನೆ ನಾಮಪತ್ರ ಸಲ್ಲಿಸಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾಗಿ ನಬಿನ್ ಅವರ ಪರವಾಗಿ 37 ಸೆಟ್ ನಾಮಪತ್ರಗಳು ಸಲ್ಲಿಕೆಯಾಗಿದ್ದವು ಮತ್ತು ಎಲ್ಲ ನಾಮಪತ್ರಗಳು ಮಾನ್ಯವಾಗಿವೆ ಎಂದು ಕೆ. ಲಕ್ಷ್ಮಣ್ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ನಬಿನ್ ಅವರ ಉಮೇದುವಾರಿಕೆಯನ್ನು ಸೂಚಿಸಿದವರಲ್ಲಿ ಪ್ರಧಾನಿ ನರೇಂದ್ರ ಮೋದಿ ಕೂಡ ಒಬ್ಬರಾಗಿದ್ದಾರೆ. ಪಕ್ಷದ ಮುಖ್ಯಸ್ಥ ಜೆ.ಪಿ. ನಡ್ಡಾ, ಕೇಂದ್ರ ಸಚಿವರಾದ ಅಮಿತ್ ಶಾ, ರಾಜನಾಥ್ ಸಿಂಗ್ ಮತ್ತು ನಿತಿನ್ ಗಡ್ಕರಿ ಸೇರಿದಂತೆ ಹಲವಾರು ಹಿರಿಯ ಬಿಜೆಪಿ ನಾಯಕರು ನಬಿನ್ ಉಮೇದುವಾರಿಕೆಯನ್ನು ಬೆಂಬಲಿಸಿದ್ದರು.
ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹುದ್ದೆಗೆ ಸೋಮವಾರ ಮಧ್ಯಾಹ್ನ 2 ರಿಂದ ಸಂಜೆ 4 ರವರೆಗೆ ನಾಮಪತ್ರ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಸಂಜೆ 4 ರಿಂದ 5 ರವರೆಗೆ ನಾಮಪತ್ರಗಳ ಪರಿಶೀಲನೆ ನಡೆದಿದ್ದು, ಸಂಜೆ 5 ರಿಂದ 6 ರವರೆಗೆ ಅಭ್ಯರ್ಥಿಗಳು ತಮ್ಮ ನಾಮಪತ್ರಗಳನ್ನು ಹಿಂಪಡೆಯಲು ಅವಕಾಶ ನೀಡಲಾಗಿತ್ತು. ಆದರೆ ನಬಿನ್ ಮಾತ್ರ ನಾಮಪತ್ರ ಸಲ್ಲಿಸಿದ್ದರಿಂದ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ನಾಮಪತ್ರ ಹಿಂಪಡೆಯುವ ಅವಧಿ ಮುಗಿದ ನಂತರ, ನಿತಿನ್ ನಬಿನ್ ಅವರ ಹೆಸರನ್ನು ಮಾತ್ರ ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಸ್ಥಾನಕ್ಕೆ ಪ್ರಸ್ತಾಪಿಸಲಾಗಿದೆ ಎಂದು ಭಾರತೀಯ ಜನತಾ ಪಕ್ಷದ ಸಂಘಟನ್ ಪರ್ವ್ನ ರಾಷ್ಟ್ರೀಯ ಚುನಾವಣಾ ಅಧಿಕಾರಿಯಾಗಿ ನಾನು ಈ ಮೂಲಕ ಘೋಷಿಸುತ್ತೇನೆ ಎಂದು ಲಕ್ಷ್ಮಣ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರಾಷ್ಟ್ರೀಯ ಅಧ್ಯಕ್ಷರಾಗಿ ಆಯ್ಕೆಯಾದ ನಿತಿನ್ ನಬಿನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್ ಶಾ ಸಹಿತ ನಾಯಕರೆಲ್ಲ ಅಭಿನಂದಿಸಿದ್ದಾರೆ. ಶೀಘ್ರ ಅವರ ಪದಗ್ರಹಣ ಸಮಾರಂಭ ನಡೆಯಲಿದೆ.
























