ವಿಡಿಯೋ ಬಹಿರಂಗವಾದ ಬಳಿಕ ತೀವ್ರ ಮುಜುಗರ ಅನುಭವಿಸುತ್ತಿರುವ ಗೃಹ ಇಲಾಖೆ
ಬೆಂಗಳೂರು: ಕಚೇರಿಯ ಒಳಗೆ ಸಮವಸ್ತ್ರದಲ್ಲಿರುವಾಗಲೇ ಹಲವು ಮಹಿಳೆಯರ ಜೊತೆ ಅನುಚಿತವಾಗಿ ವರ್ತಿಸಿದ ವಿಡಿಯೋ ಬಹಿರಂಗವಾದ ಬೆನ್ನಿಗೆ ಡಿಜಿಪಿ ರಾಮಚಂದ್ರ ರಾವ್ ಅವರನ್ನು ಸರ್ಕಾರ ಕಡ್ಡಾಯ ರಜೆ ಮೇಲೆ ಕಳುಹಿಸಿದೆ. ನಟಿ ರನ್ಯಾರಾವ್ ಒಳಗೊಂಡ ವಿದೇಶದಿಂದ ಚಿನ್ನ ಕಳ್ಳ ಸಾಗಾಟ ಪ್ರಕರಣದಲ್ಲೂ ಡಿಜಿಪಿ ರಾಮಚಂದ್ರ ರಾವ್ ಹೆಸರು ಬಲವಾಗಿ ಕೇಳಿಬಂದಿತ್ತು. ಆಗಲೂ ಸರ್ಕಾರ ಅವರನ್ನು ಕೆಲದಿನಗಳ ಮಟ್ಟಿಗೆ ರಜೆ ಮೇಲೆ ಕಳುಹಿಸಿ ಕೈತೊಳೆದುಕೊಂಡಿತ್ತು.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯದ ಡಿಜಿಪಿ ರಾಮಚಂದ್ರ ರಾವ್ ಕಚೇರಿಯಲ್ಲೇ ಮಹಿಳೆಯರ ಜೊತೆ ರಾಸಲೀಲೆಯಲ್ಲಿ ತೊಡಗಿರುವ ವಿಡಿಯೋಗಳು ನಿನ್ನೆ ವೈರಲ್ ಆಗಿ ಬಿರುಗಾಳಿ ಎಬ್ಬಿಸಿವೆ. ಈ ವಿಡಿಯೋ ಜೊತೆ ಆಡಿಯೋ ಕೂಡ ವೈರಲ್ ಆಗಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ರಾಮಚಂದ್ರ ರಾವ್ ಗೊಂದಲಕಾರಿ ಹೇಳಿಕೆ ಕೊಟ್ಟಿದ್ದಾರೆ.
ನನಗೆ ಇದು ಗೊತ್ತಿಲ್ಲ, ಯಾರೋ ಎಐ ಮೂಲಕ ಷಡ್ಯಂತ್ರ ಮಾಡಿದ್ದಾರೆ. ಕಾನೂನು ಹೋರಾಟ ಮಾಡುತ್ತೇನೆ ಎಂದು ಹೇಳಿದರೆ ಮತ್ತೊಂದು ಕಡೆ 8 ವರ್ಷಗಳ ಹಿಂದಿನ ಹಳೇ ವಿಡಿಯೋ ಎಂದು ಹೇಳಿದ್ದಾರೆ. ಹೀಗಾಗಿ ಡಿಜಿಪಿ ಹೇಳಿಕೆ ಸಾಕಷ್ಟು ಅನುಮಾನಕ್ಕೆ ಎಡೆಮಾಡಿದೆ.
ವಿಡಿಯೋ ಹೊರ ಬೀಳುತ್ತಿದ್ದಂತೆ ಗೃಹ ಸಚಿವ ಪರಮೇಶ್ವರ್ ಭೇಟಿಗೆ ಯತ್ನಿಸಿದರು. ಆದರೆ ಮನೆಯಲ್ಲಿದ್ದರೂ ಪರಮೇಶ್ವರ್ ಅವರು ರಾಮಚಂದ್ರ ರಾವ್ ಭೇಟಿಗೆ ಅವಕಾಶ ನೀಡಲಿಲ್ಲ. ಹೀಗಾಗಿ ರಾಮಚಂದ್ರ ರಾವ್ 10 ದಿನ ಕಡ್ಡಾಯ ರಜೆ ಮೇಲೆ ತೆರಳಿದ್ದಾರೆ. ರಾಮಚಂದ್ರ ರಾವ್ ನಿವೃತ್ತಿಯಾಗಲು ಇನ್ನು ಕೆಲವು ತಿಂಗಳು ಮಾತ್ರ ಉಳಿದಿದೆ.
ಸಿಎಂ ಸಿದ್ದರಾಮಯ್ಯ ಶಿಸ್ತು ಕ್ರಮದ ಸೂಚನೆ ನೀಡಿ ಕಾನೂನಿಗಿಂತ ಯಾರು ದೊಡ್ಡವರು ಇಲ್ಲ ಎಂದಿದ್ದಾರೆ. ಈ ಮಧ್ಯೆ, ಡಿಸಿಎಂ ಡಿಕೆಶಿ ಅವರು ನನಗೆ ಗೊತ್ತಿಲ್ಲ. ಪರಮೇಶ್ವರ್ ಅವರನ್ನ ಕೇಳಿ ಎಂದು ಹೇಳಿದರು.
























