ಹಳಿತಪ್ಪಿ ಇನ್ನೊಂದು ಹಳಿಗೆ ಜಿಗಿದಾಗ ಎರಡು ರೈಲುಗಳು ಮುಖಾಮುಖಿ ಡಿಕ್ಕಿ
ಮ್ಯಾಡ್ರಿಡ್ : ಸ್ಪೇನ್ ದೇಶದ ಆಂಡಲೂಸಿಯಾದ ದಕ್ಷಿಣ ಪ್ರದೇಶದಲ್ಲಿ ಎರಡು ಹೈಸ್ಪೀಡ್ ರೈಲುಗಳ ನಡುವೆ ಡಿಕ್ಕಿ ಸಂಭವಿಸಿ 21 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಗಾಯಗೊಂಡಿದ್ದಾರೆ.
ಭಾನುವಾರ ಸಂಜೆ ಮಲಗಾದಿಂದ ಮ್ಯಾಡ್ರಿಡ್‌ಗೆ ತೆರಳುತ್ತಿದ್ದ ಪ್ರಯಾಣಿಕ ರೈಲೊಂದು ಆಡಮುಜ್ ಬಳಿ ಹಳಿತಪ್ಪಿ, ಇನ್ನೊಂದು ಟ್ರ್ಯಾಕ್‌ಗೆ ಜಿಗಿದು ಎದುರುನಿಂದ ಬರುತ್ತಿದ್ದ ರೈಲಿಗೆ ಅಪ್ಪಳಿಸಿದೆ ಎಂದು ಸ್ಪೇನ್‌ನ ಅದಿಪ್ ರೈಲು ನೆಟ್ ವಾರ್ಕ್ ಆಪರೇಟರ್ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.
21 ಜನರು ಸಾವನ್ನಪ್ಪಿದ್ದಾರೆ ಮತ್ತು ಕನಿಷ್ಠ 73 ಜನರು ಗಾಯಗೊಂಡಿದ್ದಾರೆ ಎಂದು ಆಂಡಲೂಸಿಯಾದ ಉನ್ನತ ತುರ್ತುಸ್ಥಿತಿ ಅಧಿಕಾರಿ ಆಂಟೋನಿಯೊ ಸ್ಯಾನ್ಜ್ ತಿಳಿಸಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಅವರು ಹೇಳಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ 30 ಜನರನ್ನು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ಸಾರಿಗೆ ಸಚಿವ ಆಸ್ಕರ್ ಪುಯೆಂಟೆ ಸುದ್ದಿಗಾರರಿಗೆ ತಿಳಿಸಿದರು.
ಮಲಗಾ-ಮ್ಯಾಡ್ರಿಡ್ ರೈಲಿನಲ್ಲಿ ಸುಮಾರು 400 ಜನರು ಇದ್ದರು ಎಂದು ರೈಲ್ ಆಪರೇಟರ್ ಇರಿಯೊ ಹೇಳಿದ್ದಾರೆ. ನೂರಾರು ಪ್ರಯಾಣಿಕರು ಡಿಕ್ಕಿಯಾದ ರೈಲುಗಳಲ್ಲಿ ಉಳಿದಿದ್ದರಿಂದ ತುರ್ತು ಸೇವೆಗೆ ಅಡ್ಡಿಯುಂಟಾಯಿತು ಎಂದು ಅಗ್ನಿಶಾಮಕ ದಳದ ಮುಖ್ಯಸ್ಥರು ತಿಳಿಸಿದ್ದಾರೆ.
ಒಂದು ರೈಲಿನ ಬೋಗಿ ಸಂಪೂರ್ಣವಾಗಿ ತಲೆಕಳಗಾಗಿದೆ. ಘಟನಾ ಸ್ಥಳದಲ್ಲಿ ವೈದ್ಯಕೀಯ ತಂಡಗಳು ಮತ್ತು ಅಗ್ನಿಶಾಮಕ ದಳದವರು ಕಾರ್ಯನಿರ್ವಹಿಸುತ್ತಿರುವುದು ಕಂಡುಬಂದಿದೆ. ಒಂದು ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಪತ್ರಕರ್ತರೊಬ್ಬರು, ರೈಲು ಢಿಕ್ಕಿಯ ಪರಿಣಾಮವನ್ನು ವಿವರಿಸಿದ್ದಾರೆ. ಅಪಘಾತ ನಡೆದ ಸಮಯವು, “ಭೂಕಂಪದಂತೆ” ಇತ್ತು ಎಂದು ವಿವರಿಸಿದ್ದಾರೆ. ಪ್ರಯಾಣಿಕರು ತುರ್ತು ಪರಿಸ್ಥಿತಿಯ ಸುತ್ತಿಗೆಗಳನ್ನು ಬಳಸಿ ಬೋಗಿಗಳ ಕಿಟಕಿಗಳನ್ನು ಒಡೆದು ಹೊರಬಂದರು ಎಂದು ಅವರು ಹೇಳಿದ್ದಾರೆ.
























