ಅಡಗಿ ಕುಳಿತ ಉಗ್ರರನ್ನು ಹೊರಗೆಳೆಯಲು ಕಾರ್ಯಾಚರಣೆ
ಶ್ರೀನಗರ: ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಸಿಂಗ್‌ಪೋರಾ ಪ್ರದೇಶದಲ್ಲಿ ಭಾರತೀಯ ಸೇನಾಪಡೆ ಎನ್ಕೌಂಟರ್ ಆರಂಭಿಸಿದ್ದು, ಸ್ಥಳದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಭಾರಿ ಗುಂಡಿನ ಚಕಮಕಿ ನಡೆಯುತ್ತಿದೆ ಎಂದು ತಿಳಿದುಬಂದಿದೆ.
ಸ್ಥಳದಲ್ಲಿ ಪಾಕಿಸ್ತಾನದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಯ ಮೂವರು ಭಯೋತ್ಪಾದಕರು ಅಡಗಿ ಕುಳಿತಿದ್ದು, ಉಗ್ರರನ್ನು ಭದ್ರತಾ ಪಡೆಗಳು ಸುತ್ತುವರಿದು ಕಾರ್ಯಾಚರಣೆ ನಡೆಸುತ್ತಿವೆ. ಈ ನಡುವೆ ಯೋಧರ ಮೇಲೆ ಉಗ್ರರು ಗ್ರೆನೇಡ್‌ಗಳನ್ನು ಎಸೆದಿದ್ದು, ಪರಿಣಾಮ 8 ಮಂದಿ ಸೈನಿಕರು ಗಾಯಗೊಂಡಿದ್ದಾರೆಂದು ವರದಿಗಳು ತಿಳಿಸಿವೆ.
ಭದ್ರತಾ ಪಡೆಗಳು ಹಾಗೂ ಜಮ್ಮು ಮತ್ತು ಕಾಶ್ಮೀರ ಪೊಲೀಸರು ಜಂಟಿಯಾಗಿ ಸ್ಥಳದಲ್ಲಿ ಭಯೋತ್ಪಾದನಾ ನಿಗ್ರಹ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಶೋಧ ಕಾರ್ಯಾಚರಣೆಯ ಸಮಯದಲ್ಲಿ ಕಿಶ್ತ್ವಾರ್ ಜಿಲ್ಲೆಯ ಛಾತ್ರುವಿನ ಈಶಾನ್ಯದಲ್ಲಿರುವ ಪ್ರದೇಶದಲ್ಲಿ ಉಗ್ರರು ಅಡಗಿ ಕುಳಿತಿರುವುದು ಖಚಿತವಾಗಿತ್ತು. ಈ ವೇಳೆ ಭದ್ರತಾ ಪಡೆಗಳು ಸ್ಥಳವನ್ನು ಸುತ್ತುವರಿದು ಎನ್ಕೌಂಟರ್ ಆರಂಭಿಸಿವೆ.
ಹಲವಾರು ಗಂಟೆಗಳ ಕಾಲ ಉಗ್ರರು ಹಾಗೂ ಭದ್ರತಾಪಡೆಗಳ ನಡುವೆ ಭಾರಿ ಗುಂಡಿನ ಚಕಮಕಿ ನಡೆದಿದ್ದು, ನಂತರ ಉಗ್ರರು ಯೋಧರ ಮೇಲೆ ಗ್ರೆನೇಡ್ ಎಸೆದಿದ್ದಾರೆಂದು ತಿಳಿದುಬಂದಿದೆ.
ಸ್ಥಳದಲ್ಲಿ ಪಾಕಿಸ್ತಾನ ಮೂಲದ ಜೈಶ್-ಇ-ಮೊಹಮ್ಮದ್ ಉಗ್ರ ಸಂಘಟನೆಗೆ ಸೇರಿದ 2-3 ವಿದೇಶಿ ಉಗ್ರರ ಗುಂಪು ಇರುವುದು ಖಚಿತವಾಗಿದ್ದು, ಹೆಚ್ಚುವರಿ ಭದ್ರತಾ ಪಡೆಗಳು ಸ್ಥಳಕ್ಕೆ ತೆರಳಿ ಉಗ್ರರಿಗೆ ದಿಟ್ಟ ಉತ್ತರ ನೀಡುತ್ತಿವೆ. ಗಾಯಗೊಂಡಿರುವ ಯೋಧರನ್ನು ಸೈನಿಕರನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಚಿಕಿತ್ಸೆ ಮುಂದುವರಿದಿದೆ.
























