ವಿಮಾನ ಸಂಚಾರ ವ್ಯತ್ಯಯ : ಇಂಡಿಗೋ ಸಂಸ್ಥೆಗೆ 22 ಕೋ. ರೂ. ದಂಡ

ದೇಶಾದ್ಯಂತ ಹಲವು ದಿನ ವಿಮಾನ ಸಂಚಾರ ವ್ಯತ್ಯಯವಾಗಿ ಪರದಾಡಿದ್ದ ಪ್ರಯಾಣಿಕರು

ನವದೆಹಲಿ: ಕಳೆದ ವರ್ಷ ಡಿಸೆಂಬರ್‌ನಲ್ಲಿ ಇಂಡಿಗೋ ವಿಮಾನಗಳ ಸಂಚಾರ ಸೇವೆಯಲ್ಲಿ ಉಂಟಾದ ಭಾರಿ ವ್ಯತ್ಯಯ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಗರಿಕ ವಿಮಾನಯಾನ ನಿರ್ದೇಶನಾಲಯ ಇಂಡಿಗೋ ಸಂಸ್ಥೆಗೆ ಬರೋಬ್ಬರಿ 22.20 ಕೋಟಿ ರೂ. ದಂಡ ವಿಧಿಸಿದೆ. ಇದರ ಜೊತೆಗೆ ಇಂಡಿಗೋ ವಿಮಾನಯಾನ ಸಂಸ್ಥೆಗೆ 50 ಕೋಟಿ ರೂ. ಬ್ಯಾಂಕ್ ಗ್ಯಾರಂಟಿ ನೀಡುವಂತೆ ಆದೇಶಿಸಿದೆ.

ಕಳೆದ ವರ್ಷದ ಡಿಸೆಂಬ‌ರ್ 3ರಿಂದ 5ರ ವರೆಗೆ ಇಂಡಿಗೋ ವಿಮಾನಗಳ ಕಾರ್ಯಾಚರಣೆಯಲ್ಲಿ ಭಾರಿ ವ್ಯತ್ಯಯ ಉಂಟಾಗಿತ್ತು. 2,507 ವಿಮಾನಗಳ ಹಾರಾಟ ರದ್ದುಗೊಳಿಸಲಾಗಿತ್ತು, ಜೊತೆಗೆ 1,852 ವಿಮಾನಗಳ ಹಾರಾಟದಲ್ಲಿ ವಿಳಂಬವಾಗಿತ್ತು. ಇದರಿಂದ 3 ಲಕ್ಷಕ್ಕೂ ಅಧಿಕ ಪ್ರಯಾಣಿಕರು ವಿವಿಧ ವಿಮಾನ ನಿಲ್ದಾಣಗಳಲ್ಲಿ ಸಿಲುಕಿ, ಪರದಾಡಿದ್ದರು.





















































 
 

ನಾಗರಿಕ ವಿಮಾನಯಾನ ಇಲಾಖೆ ನಿರ್ದೇಶನದ ಮೇರೆಗೆ ಡಿಜಿಸಿಎ ನೇಮಿಸಿದ್ದ ನಾಲ್ವರು ಸದಸ್ಯರ ಸಮಿತಿ ನೀಡಿದ ಶಿಫಾರಸುಗಳನ್ನು ಆಧರಿಸಿ ಶುಲ್ಕ ವಿಧಿಸುವ ಕ್ರಮ ಜರುಗಿಸಲಾಗಿದೆ. ಇಂಡಿಗೋ ವಿಮಾನಗಳ ಕಾರ್ಯಾಚರಣೆ ವ್ಯತ್ಯಯಕ್ಕೆ ಕಾರಣವಾದ ಅಂಶಗಳ ಮೌಲ್ಯಮಾಪನವನ್ನು ಈ ಸಮಿತಿ ಮಾಡಿತ್ತು. ತನಿಖೆಯಲ್ಲಿ ಇಂಡಿಗೋ ಆಡಳಿತ ಮಂಡಳಿಯ ಯೋಜನೆ, ಕಾರ್ಯಾಚರಣೆ ಮತ್ತು ನಿಯಂತ್ರಣ ವೈಫಲ್ಯಗಳು ಪತ್ತೆಯಾಗಿದ್ದವು. ಇದರ ಆಧಾರದ ಮೇಲೆ ಡಿಜಿಸಿಎ ಕಠಿಣ ಕ್ರಮ ಜರುಗಿಸಿದೆ.

ಡಿಸೆಂಬರ್ 2025ರ ಅಡಚಣೆಗಳ ಸಂದರ್ಭದಲ್ಲಿ ನಮ್ಮ ಪ್ರಯಾಣಿಕರಿಗೆ ಉಂಟಾದ ಅನನುಕೂಲತೆಗೆ ನಾವು ತೀವ್ರವಾಗಿ ವಿಷಾದಿಸುತ್ತೇವೆ. ಕಾರ್ಯಾಚರಣೆಯ ಲೋಪಗಳಿಗೆ ನಾವು ಸಂಪೂರ್ಣ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇವೆ. ಅಂತಹ ಘಟನೆಗಳು ಮತ್ತೆ ಸಂಭವಿಸದಂತೆ ನೋಡಿಕೊಳ್ಳಲು ಅಗತ್ಯ ಸುಧಾರಣೆಗಳನ್ನು ಜಾರಿಗೆ ತರಲು ಬದ್ಧರಾಗಿದ್ದೇವೆ ಎಂದು ಇಂಡಿಗೋ ವಕ್ತಾರರು ಹೇಳಿದ್ದಾರೆ. ಇದರ ಜೊತೆಗೆ ವಿಮಾನಗಳು ರದ್ದಾದ ಅಥವಾ 3 ಗಂಟೆಗಳಿಗಿಂತ ಹೆಚ್ಚು ವಿಳಂಬವಾದ ಪ್ರಯಾಣಿಕರಿಗೆ 10,000 ರೂ. ಪರಿಹಾರದ ವೋಚರ್ ನೀಡಿದೆ.

error: Content is protected !!
Scroll to Top