ಬೆಂಗಳೂರು: ಟಿಪ್ಪರ್ – ಬೈಕ್ ನಡುವೆ ನಡೆದ ಅಪಘಾತದಲ್ಲಿ ಮೂವರು ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟ ಘಟನೆ ದೇವನಹಳ್ಳಿ ಬಳಿ ನಡೆದಿದೆ.
ಮೃತಪಟ್ಟವರು ಹುಣಸಮಾರೇನಹಳ್ಳಿಯ ಖಾಸಗಿ ಕಾಲೇಜಿನ ವಿದ್ಯಾರ್ಥಿಗಳಾಗಿದ್ದು, ಓರ್ವನನ್ನು ತೌಸೀಫ್ ಎಂದು ಗುರುತಿಸಲಾಗಿದೆ. ಇನ್ನಿಬ್ಬರ ಗುರುತು ಪತ್ತೆಯಾಗಿಲ್ಲ.
ಮೂವರು ವಿದ್ಯಾರ್ಥಿಗಳು ಬೂದಿಗೆರೆ ಕಡೆಗೆ ಹೊರಟಿದ್ದಾಗಿ ತಿಳಿದು ಬಂದಿದೆ. ಈ ಸಂದರ್ಭ ಬೈಕ್ ಡಿವೈಡರ್‌ಗೆ ಢಿಕ್ಕಿ ಹೊಡೆದು ಬಳಿಕ ಎದುರಿನಿಂದ ಬರುತ್ತಿದ್ದ ಟಿಪ್ಪರ್‌ಗೆ ಢಿಕ್ಕಿ ಹೊಡೆದಿದೆ. ಗುದ್ದಿದ ರಭಸಕ್ಕೆ ಮೂರೂ ದೇಹಗಳು ನಜ್ಜುಗುಜ್ಜಾಗಿದೆ ಎಂದು ತಿಳಿದು ಬಂದಿದೆ.
ಘಟನೆಯ ಬಳಿಕ ಟಿಪ್ಪರ್ ಚಾಲಕ ವಾಹನದ ಸಮೇತ ಪರಾರಿಯಾಗಿದ್ದಾನೆ. ದೇವನಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
























