ಹುಬ್ಬಳ್ಳಿ: ಸಿದ್ದರಾಮಯ್ಯ ಇವರು 2028 ರ ವರೆಗೂ ಮುಖ್ಯಮಂತ್ರಿಯಾಗಿ ಇರುತ್ತಾರೆ. ಬೀದಿ ದಾಸಯ್ಯನನ್ನು ಸಿಎಂ ಎಂಬುದಾಗಿ ಹೈಕಮಾಂಡ್ ಘೋಷಣೆ ಮಾಡಿದರೂ ನಾವೆಲ್ಲರೂ ಒಪ್ಪಿಕೊಳ್ಳಬೇಕಾಗುತ್ತದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜ್ಯದಲ್ಲಿ ಸಿಎಂ ಸ್ಥಾನ ಸದ್ಯಕ್ಕಂತೂ ಖಾಲಿ ಇಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಆ ಸ್ಥಾನದಲ್ಲಿ ಮುಂದುವರೆಯುತ್ತಾರೆ ಎನ್ನುವ ಅಚಲ ನಂಬಿಕೆ ನನ್ನದು. ಕೆಲವರು ನವೆಂಬರ್ ಕ್ರಾಂತಿಯಾಗುತ್ತದೆ ಎಂದು ಹೇಳಿದ್ದರು. ಆದರೆ ಯಾವ ಕ್ರಾಂತಿಯೂ ಆಗಲಿಲ್ಲ. ಮುಂದೆ ಯುಗಾದಿ ಬರುತ್ತದೆಯೇ ವಿನಃ ಯಾವ ಕ್ರಾಂತಿಯೂ ಆಗುವುದಿಲ್ಲ ಎಂದು ತಿಳಿಸಿದ್ದಾರೆ.
ನಾವು ಹೈಕಮಾಂಡ್ ಹೇಳಿದ್ದನ್ನು ಒಪ್ಪಿಕೊಳ್ಳಬೇಕು. ಏಕೆಂದರೆ ನಮ್ಮದು ರಾಷ್ಟ್ರೀಯ ಪಕ್ಷ. ಡಿಸಿಎಂ ಡಿ.ಕೆ.ಶಿವಕುಮಾರ್ ಅವರು, ಕೆಪಿಸಿಸಿ ಅಧ್ಯಕ್ಷರಾಗಿ, ಡಿಸಿಎಂ ಆಗಿ ಪಕ್ಷ ಹಾಗೂ ಸರ್ಕಾರ ಕೆಲಸಕ್ಕೆ ದೆಹಲಿಗೆ ಹೋಗುವುದು ಸಾಮಾನ್ಯ. ನಾವು ದೆಹಲಿಗೆ ಹೋದಾಗಲು ಅವಕಾಶ ಸಿಕ್ಕರೆ ಪಕ್ಷದ ವರಿಷ್ಠರನ್ನು ಭೇಟಿಯಾಗುತ್ತೇವೆ. ಜ.24 ರಂದು ಹುಬ್ಬಳ್ಳಿಯಲ್ಲಿ ಸ್ಲಂಬೋರ್ಡ್ ಅಡಿಯಲ್ಲಿ ರಾಜ್ಯದ ಸುಮಾರು 42,345 ಮನೆಗಳನ್ನು ಹಸ್ತಾಂತರ ಮಾಡಲಾಗುವುದು. ಎಐಸಿಸಿ ಅಧ್ಯಕ್ಷರು, ಸಿಎಂ, ಡಿಸಿಎಂ, ಸಚಿವರು, ಇನ್ನಿತರರು ಪಾಲ್ಗೊಳ್ಳಲಿದ್ದಾರೆ. ಬಿಜೆಪಿ ಅವಧಿಯಲ್ಲಿ ಸ್ಲಂಬೋರ್ಡ್ ಅಡಿಯಲ್ಲಿ ಒಂದೇ ಒಂದು ಮನೆ ಹಂಚಿಕೆ ಮಾಡಿದ್ದನ್ನು ಸಾಬೀತು ಪಡಿಸಿದರೆ ನಾನು ರಾಜಕೀಯವಾಗಿ ನಿವೃತ್ತಿ ಘೋಷಣೆ ಮಾಡುವೆ. ಈ ಬಗ್ಗೆ ಬಿಜೆಪಿಯವರಿಗೆ ಬಹಿರಂಗ ಸವಾಲು ಹಾಕುವೆ ಎಂದು ಜಮೀರ್ ಅಹಮದ್ ಖಾನ್ ಹೇಳಿದ್ದಾರೆ.
























