ಮುಂಬಯಿ ಮಹಾನಗರಪಾಲಿಕೆಯಲ್ಲಿ ಬಿಜೆಪಿ ಆಡಳಿತದತ್ತ ದಾಪುಗಾಲು : ಠಾಕ್ರೆ ಪರಿವಾರದ ಕಾರುಬಾರು ಅಂತ್ಯ

ಮಹಾರಾಷ್ಟ್ರದ ಮಹಾನಗರಪಾಲಿಕೆ ಚುನಾವಣೆಯಲ್ಲೂ ಕೇಸರಿ ಅಲೆ ಕಮಾಲ್‌

ಮುಂಬಯಿ : ಮಹಾರಾಷ್ಟ್ರದ ನಗರಪಾಲಿಕೆ ಚುನಾವಣೆಯಲ್ಲೂ ಕೇಸರಿ ಅಲೆ ಮುಂದುವರಿದಿದೆ. ಇಡೀ ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮುನ್ನಡೆ ಕಾಯ್ದುಕೊಂಡಿದೆ. ಅದರಲ್ಲೂ ಮುಂಬಯಿ ಮಹಾನಗರಪಾಲಿಕೆಯ;ಲ್ಲಿ ಹಲವು ದಶಕಗಳ ಶಿವಸೇನೆಯ ಆಡಳಿತ ಮುಕ್ತಾಯಗೊಂಡಿದೆ. ಶಿವಸೇನೆಯ ಸಂಸ್ಥಾಪಕ ಬಾಳಾ ಸಾಹೇಬ್ ಠಾಕ್ರೆ ಕಾಲದಿಂದಲೂ ತಮ್ಮ ಕುಟುಂಬದ ಹಿಡಿತದಲ್ಲಿ ಇಟ್ಟುಕೊಂಡಿದ್ದ ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆಯ ಉದ್ದವ್ ಠಾಕ್ರೆ ಮತ್ತು ಎಂಎನ್ಎಸ್ ಸಂಸ್ಥಾಪಕ ರಾಜ್ ಠಾಕ್ರೆ ಆಧಿಪತ್ಯಕ್ಕೆ ಮತದಾರ ಮಂಗಳ ಹಾಡಿದ್ದಾನೆ.

ಮುಂಬೈ ಮಹಾನಗರ ಪಾಲಿಕೆಯಲ್ಲಿ ಶಿವಸೇನೆಯ ಠಾಕ್ರೆ ಬಣ ಸಮಾಧಾನಕಾರಿ ಸಾಧನೆಯನ್ನು ಮಾಡಿದ್ದರೂ, ಮುಂಬೈ ಆಸುಪಾಸಿನ ಎರಡು ಮಹಾನಗರ ಪಾಲಿಕೆಗಳಾದ ನವಿಮುಂಬೈ ಮತ್ತು ಥಾಣೆಯಲ್ಲಿ ಉದ್ದವ್ ಠಾಕ್ರೆ ಮತ್ತು ರಾಜ್ ಠಾಕ್ರೆ ಸಹೋದರ ಪಾರ್ಟಿ ಹೇಳಹೆಸರಿಲ್ಲದಂತೆ ಧೂಳೀಪಟವಾಗಿದೆ.
ನವಿಮುಂಬೈ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯ ಮತಎಣಿಕೆ ಪ್ರಕ್ರಿಯೆ ಬಿರುಸಿನಿಂದ ಸಾಗುತ್ತಿದೆ. ಕೈಬೆರಳಿಗೆ ಹಾಕಿದ ಶಾಹಿಯ ಬಗ್ಗೆ ಶಿವಸೇನೆಯ ಠಾಕ್ರೆ ಬಣ ಮತ್ತು ಲೋಕಸಭೆಯಲ್ಲಿ ವಿಪಕ್ಷದ ನಾಯಕ ರಾಹುಲ್ ಗಾಂಧಿ ಚುನಾವಣಾ ಆಯೋಗವನ್ನು ಪ್ರಶ್ನಿಸಿದ್ದಾರೆ.





















































 
 

ಒಟ್ಟಾರೆಯಾಗಿ ಮುಂಬೈನಲ್ಲಿ ಶೇ.52.94ರಷ್ಟು ಮತದಾನ ನಡೆದಿತ್ತು. ಮಹಾರಾಷ್ಟ್ರ ಚುನಾವಣಾ ಆಯೋಗವು, 29 ಪಾಲಿಕೆಗಳ ಅಧಿಕೃತ ಮತದಾನದ ಶೇಕಡಾವಾರು ಪ್ರಮಾಣವನ್ನು ಇನ್ನೂ ಬಿಡುಗಡೆ ಮಾಡಲಿಲ್ಲ. ಇದು, ಕೂಡ ವಿಪಕ್ಷಗಳ ಕೆಂಗಣ್ಣಿಗೆ ಕಾರಣವಾಗಿದೆ.

ನವಿಮುಂಬೈ ಮತ್ತು ಥಾಣೆಯಲ್ಲಿ ಪ್ರಮುಖ ರಾಜಕೀಯ ಪಾರ್ಟಿಗಳಾದ, ಶಿವಸೇನೆಯ ಎರಡು ಬಣ, ಎನ್‌ಸಿಪಿಯ ಎರಡು ಬಣ, ಬಿಜೆಪಿ ಮತ್ತು ಕಾಂಗ್ರೆಸ್ ಎಲ್ಲವೂ, ಮತದಾರರಲ್ಲಿ ತಮ್ಮದೇ ಆದ ಛಾಪು ಮೂಡಿಸಲು ಪ್ರಯತ್ನಿಸಿವೆ. ಎಲ್ಲಾ ಪಾರ್ಟಿಗಳೂ ಭರ್ಜರಿಯಾಗಿ ಚುನಾವಣಾ ಪ್ರಚಾರದದಲ್ಲಿ ತೊಡಗಿಸಿಕೊಂಡಿದ್ದವು.

ಸದ್ಯದ ಟ್ರೆಂಡಿಂಗ್ ಪ್ರಕಾರ ನವಿಮುಂಬೈನಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಒಕ್ಕೂಟ ಭಾರೀ ಲೀಡಿಂಗ್‌ನಲ್ಲಿ ಮುನ್ನುಗ್ಗುತ್ತಿದೆ. ನವಿಮುಂಬೈನ 111 ವಾರ್ಡ್ ಪೈಕಿ, 110 ವಾರ್ಡ್‌ಗಳ ಟ್ರೆಂಡಿಂಗ್ ಲಭ್ಯವಾಗಿದೆ. ಇದರ ಪ್ರಕಾರ, ಬಿಜೆಪಿ -75, ಶಿವಸೇನೆ ಶಿಂಧೆ ಬಣ -32, ಶಿವಸೇನೆ ಠಾಕ್ರೆ ಬಣ -2 ಮತ್ತು ಇತರರು ಒಂದು ಕ್ಷೇತ್ರದಲ್ಲಿ ಗೆಲುವು /ಮುನ್ನಡೆಯನ್ನು ಸಾಧಿಸಿದ್ದಾರೆ.

ಥಾಣೆಯಲ್ಲಿ, 131 ವಾರ್ಡ್‌ಗಳ ಪೈಕಿ, 43 ವಾರ್ಡ್‌ಗಳ ಟ್ರೆಂಡಿಂಗ್ ಮಾತ್ರ ಲಭ್ಯವಾಗಿದೆ. ಶಿವಸೇನೆಯ ಶಿಂಧೆ ಬಣ-24, ಬಿಜೆಪಿ-7, ಎಐಎಂಐಎಂ-5, ಶರದ್ ಪವಾರ್ ಮತ್ತು ಅಜಿತ್ ಪವಾರ್ ಅವರ ಎನ್ಸಿಪಿ ತಲಾ ನಾಲ್ಕು ಕ್ಷೇತ್ರಗಳಲ್ಲಿ ಗೆಲುವು/ ಮುನ್ನಡೆ ಸಾಧಿಸಿದ್ದಾರೆ.

ನವಿಮುಂಬೈನ ಬಹುತೇಕ ಎಲ್ಲಾ ವಾರ್ಡ್‌ಗಳ ಫಲಿತಾಂಶ ಲಭ್ಯವಾಗಿದೆ. ಬಿಜೆಪಿ ಮತ್ತು ಶಿವಸೇನೆ (ಶಿಂಧೆ ಬಣ) 107 ಸ್ಥಾನದಲ್ಲಿ ಗೆದ್ದಿದೆ/ ಮುನ್ನಡೆ ಸಾಧಿಸಿದೆ. ಮುಂಬೈ ಮಹಾನಗರದ ಕೂಗಳತೆ ದೂರದಲ್ಲಿರುವ ಇಲ್ಲಿ ಶಿವಸೇನೆಯ ಠಾಕ್ರೆ ಬಣ ಕೇವಲ ಎರಡು ಸ್ಥಾನದಲ್ಲಿ ಮುನ್ನಡೆ ಸಾಧಿಸಿದೆ. ರಾಜ್ ಠಾಕ್ರೆ ಅವರ ಪಾರ್ಟಿಯಾಗಲಿ, ಕಾಂಗ್ರೆಸ್ ಪಾರ್ಟಿಯಾಗಲಿ ಖಾತೆ ತೆರೆಯಲು ವಿಫಲವಾಗಿದೆ.

ಥಾಣೆಯಲ್ಲೂ ಕಾಂಗ್ರೆಸ್ ಸಾಧನೆ ಹೀನಾಯವಾಗಿದೆ. ಮಹಾರಾಷ್ಟ್ರದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಇದುವರೆಗೆ 2,869 ವಾರ್ಡ್ ಪೈಕಿ, ಬಿಜೆಪಿ 2,125 ವಾರ್ಡ್‌ಗಳ ಟ್ರೆಂಡಿಂಗ್ ಲಭ್ಯವಾಗಿದೆ. ಬಿಜೆಪಿ – 1,106, ಶಿವಸೇನೆ ಶಿಂಧೆ ಬಣ – 287, ಕಾಂಗ್ರೆಸ್ – 192, ಶಿವಸೇನೆ ಠಾಕ್ರೆ ಬಣ – 136, ಎನ್ಸಿಪಿ ಅಜಿತ್ ಪವಾರ್ ಬಣ – 120 ಸ್ಥಾನದಲ್ಲಿ ಮುನ್ನಡೆಯನ್ನು ಕಾಯ್ದುಕೊಂಡಿದೆ.

error: Content is protected !!
Scroll to Top