ಸಂಸದ ಕ್ಯಾ.ಬ್ರಿಜೇಶ್ ಚೌಟ ಪ್ರಯತ್ನಕ್ಕೆ ಸಿಕ್ಕಿದ ಯಶಸ್ಸು
ಮಂಗಳೂರು : ಮಂಗಳೂರು ಬೈಪಾಸ್ ಮೂಲಕ ಹಾದು ಹೋಗುವ ಸುರತ್ಕಲ್-ಬಿ.ಸಿ.ರೋಡ್ ಹೆದ್ದಾರಿ ಅಗಲೀಕರಣ ಹಾಗೂ ತಲಪಾಡಿಯಿಂದ ಕುಂದಾಪುರದವರೆಗಿನ ಎನ್‌ಹೆಚ್-66ರ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆ ನಿರ್ಮಾಣಕ್ಕೆ ವಿಸ್ತೃತ ಯೋಜನಾ ವರದಿ(ಡಿಪಿಆರ್) ತಯಾರಿಸಲು ಕೇಂದ್ರ ಸರ್ಕಾರದ ಅನುಮೋದನೆ ದೊರೆತಿದೆ. ಆ ಮೂಲಕ ಕರಾವಳಿ ಜನರ ಬಹುದಿನಗಳ ಬೇಡಿಕೆ ಈಡೇರಿದೆ. ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರ ಅವಿರತ ಪರಿಶ್ರಮದಿಂದಾಗಿ ಕರಾವಳಿಯಲ್ಲಿ ಹಾದುಹೋಗುವ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುವ ಪ್ರಯತ್ನಕ್ಕೆ ಮೊದಲ ಹಂತದ ಯಶಸ್ಸು ಸಿಕ್ಕಿದೆ.
ಬಿಸಿ ರೋಡ್-ಸುರತ್ಕಲ್ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವ ಜತೆಗೆ ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್ ರಸ್ತೆ ನಿರ್ಮಿಸಬೇಕೆಂಬುದು ಈ ಭಾಗದ ಜನರ ಪ್ರಮುಖ ಬೇಡಿಕೆ ಕೂಡ ಆಗಿತ್ತು. ಕ್ಯಾ.ಚೌಟ ದೀರ್ಘ ಕಾಲದಿಂದ ಬಾಕಿಯಿದ್ದ ಯೋಜನೆಗೆ ಅನುಮೋದನೆ ಪಡೆದು ಅದನ್ನು ಕಾರ್ಯರೂಪಕ್ಕೆ ತರುವುದಕ್ಕೆ ನಿರಂತರ ಪ್ರಯತ್ನ ನಡೆಸಿದ್ದರು.
ಸಂಸದರ ಕಚೇರಿಯ ನಿರಂತರ ಫಾಲೋಅಪ್‌ನ ಫಲವಾಗಿ ಹೆದ್ದಾರಿ ಅಭಿವೃದ್ಧಿ ಯೋಜನೆಗೆ ಡಿಪಿಆರ್ ತಯಾರಿಕೆಗೆ ಹೆದ್ದಾರಿ ಸಚಿವಾಲಯದಿಂದ ಅನುಮೋದನೆ ದೊರೆತಿದೆ. ಡಿಪಿಆರ್ ತಯಾರಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಸೂಚಿಸಿ ಕನ್ಸೆಲ್ಟೆಂಟ್‌ಗಳಿಗೆ ಕೆಲಸ ಪ್ರಾರಂಭಿಸುವುದಕ್ಕೆ ಅಧಿಕೃತ ನೋಟಿಸ್ ನೀಡಲಾಗಿದೆ. ಡಿಪಿಆರ್‌ನಲ್ಲಿ ರಸ್ತೆ ಅಲೈನ್‌ಮೆಂಟ್, ಸರ್ವೀಸ್ ರಸ್ತೆ, ಗ್ರೇಡ್ ಸೆಪರೇಟೆಡ್ ಜಂಕ್ಷನ್‌ಗಳು, ಹೆದ್ದಾರಿಯ ಸಾಮರ್ಥ್ಯ ವೃದ್ಧಿ, ರಸ್ತೆ ಸುರಕ್ಷತೆ ಹಾಗೂ ದೀರ್ಘಾವಧಿಯ ಸಂಚಾರ ನಿಯಂತ್ರಣ ಕ್ರಮಗಳನ್ನು ಪರಿಶೀಲಿಸಲಾಗುತ್ತದೆ.
ಡಿಪಿಆರ್‌ಗೆ ಅನುಮೋದನೆ ಲಭಿಸಿರುವ ಬಗ್ಗೆ ಪ್ರತಿಕ್ರಿಯಿಸಿರುವ ಸಂಸದ ಕ್ಯಾ. ಬ್ರಿಜೇಶ್ ಚೌಟ, ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೆ ಒಳಗಾಗಿದ್ದ ಪ್ರಮುಖ ಬೇಡಿಕೆ ಈಡೇರಿಸುವಲ್ಲಿ ಸುವ್ಯವಸ್ಥಿತವಾದ ಯೋಜನೆಯತ್ತ ಸಾಗುವ ಮಹತ್ವದ ಮೈಲಿಗಲ್ಲು ಆಗಿದೆ. ಈ ಡಿಪಿಆರ್ ಅನುಮೋದನೆಯಿಂದ ಮುಂದಿನ ಯೋಜನೆಗಳ ಅನುಷ್ಠಾನಕ್ಕೆ ಅಗತ್ಯವಾದ ತಾಂತ್ರಿಕ ಮತ್ತು ಆಡಳಿತಾತ್ಮಕ ನೆಲೆ ಸಿದ್ಧವಾಗಲಿದೆ ಎಂದು ಸಂತಸ ವ್ಯಕ್ತಪಡಿಸಿದ್ದಾರೆ.
ಮಂಗಳೂರು ನಗರಕ್ಕೆ ಬೈಪಾಸ್
ಬಿಸಿ ರೋಡ್‌ನಿಂದ ಪಡೀಲ್-ನಂತೂರು ವೃತ್ತದ ಮೂಲಕ ಹಾದು ಹೋಗುವ ಹೆದ್ದಾರಿಯನ್ನು ಅಭಿವೃದ್ಧಿಪಡಿಸುವುದರಿಂದ ಮಂಗಳೂರು ನಗರಕ್ಕೂ ಬೈಪಾಸ್ ರಸ್ತೆಯ ಅನುಕೂಲ ದೊರೆಯಲಿದೆ. ಈ ಯೋಜನೆಯಡಿ ಮಂಗಳೂರು ಬೈಪಾಸ್ ಅಭಿವೃದ್ಧಿಯಾಗುವುದರಿಂದ ನಂತೂರು ಭಾಗದ ವಾಹನ ದಟ್ಟಣೆ ಹಾಗೂ ಇತರ ಸಂಚಾರ ಸಮಸ್ಯೆಗಳಿಗೆ ಶಾಶ್ವತ ಪರಿಹಾರ ದೊರೆಯಲಿದೆ.
ಸುರತ್ಕಲ್-ಬಿ.ಸಿರೋಡ್ ಹೆದ್ದಾರಿ ಮೇಲ್ದರ್ಜೆಗೆ
ಸುರತ್ಕಲ್-ಬಿ.ಸಿ ರೋಡ್‌ವರೆಗಿನ ಹೆದ್ದಾರಿ ವ್ಯಾಪ್ತಿಯು ಕ್ಯಾ.ಚೌಟ ಅವರ ಸತತ ಪ್ರಯತ್ನದ ಫಲವಾಗಿ ಈಗಾಗಲೇ ಎನ್‌ಎಚ್‌ಎಲ್‌ಎಂಎಲ್ ವ್ಯಾಪ್ತಿಯಿಂದ ಎನ್‌ಎಚ್‌ಎಐಗೆ ಹಸ್ತಾಂತರಗೊಂಡಿದೆ. ಈ ಹೆದ್ದಾರಿಯನ್ನು ಮತ್ತಷ್ಟು ಮೇಲ್ದರ್ಜೆಗೇರಿಸುವ ಜತೆಗೆ ರಸ್ತೆ ಸುರಕ್ಷತಾ ವ್ಯವಸ್ಥೆ ಅಳವಡಿಸುವ ಹಿನ್ನಲೆಯಲ್ಲಿ ಡಿಪಿಆರ್ ಅನುಮೋದನೆ ಮಹತ್ವದ ಹೆಜ್ಜೆಯಾಗಿದೆ. ಸುರತ್ಕಲ್-ಬಿಸಿ ರೋಡ್ ಹೆದ್ದಾರಿಯನ್ನು ಮೇಲ್ದರ್ಜೆಗೇರಿಸುವುದರಿಂದ ನಗರದ ಎಲ್ಲ ಸಂಚಾರ ಸಮಸ್ಯೆಗಳಿಗೂ ಶಾಶ್ವತ ಪರಿಹಾರ ದೊರೆಯಲಿದೆ.
ತಲಪಾಡಿಯಿಂದ ಕುಂದಾಪುರದವರೆಗೆ ಸರ್ವೀಸ್ ರಸ್ತೆ
ತಲಪಾಡಿಯಿಂದ ಕುಂದಾಪುರದವರೆಗೆ ಹೊಸದಾಗಿ ಪ್ರತ್ಯೇಕ ಸರ್ವೀಸ್ ರಸ್ತೆ ನಿರ್ಮಾಣವಾಗಲಿದೆ. ಪ್ರಸ್ತುತ ಈ ಹೆದ್ದಾರಿಯಲ್ಲಿ ಸರ್ವೀಸ್ ರಸ್ತೆಯಿಲ್ಲದ ಕಾರಣ ಸ್ಥಳೀಯರಿಗೂ ಹಾಗೂ ಇತರ ಸಾರ್ವಜನಿಕರಿಗೂ ಅನನುಕೂಲವಾಗುತ್ತಿದ್ದು, ರಸ್ತೆ ಸುರಕ್ಷತೆಗೂ ಹತ್ತಾರು ಸವಾಲುಗಳು ಎದುರಾಗಿವೆ. ಈಗ ಡಿಪಿಆರ್ ಅನುಮೋದನೆಯಿಂದ ಎಲ್ಲ ಸಮಸ್ಯೆಗಳಿಗೂ ಮುಕ್ತಿ ದೊರೆಯುವ ಕಾಲ ಸನ್ನಿಹಿತವಾಗಿದೆ.
ಬೈಕಂಪಾಡಿಯಲ್ಲಿ ಎಲಿವೇಟೆಡ್ ರಸ್ತೆ
ಹೆದ್ದಾರಿ ಅಭಿವೃದ್ಧಿಯ ಭಾಗವಾಗಿ ಕುದುರೆಮುಖ ಕಬ್ಬಿಣ ಅದಿರು ಕಾರ್ಖಾನೆಯಿಂದ ಬೈಕಂಪಾಡಿವರೆಗೆ ಎಲಿವೇಟೆಡ್ ರಸ್ತೆ ಕೂಡ ನಿರ್ಮಾಣವಾಗಲಿದೆ. ಈ ಯೋಜನೆಗೆ ಈಗಾಗಲೇ ಡಿಪಿಆರ್ ತಯಾರು ಆಗಿದ್ದು, ಟೆಂಡರ್ ಹಂತಕ್ಕೆ ಬಂದಿದೆ. ದಕ್ಷಿಣ ಕನ್ನಡ ಜಿಲ್ಲೆಯ ಈ ಎಲ್ಲ ಹೆದ್ದಾರಿ ಯೋಜನೆಗಳ ಅಭಿವೃದ್ಧಿಗೆ ಕೇಂದ್ರ ಸರ್ಕಾರದ ಈ ಡಿಪಿಆರ್ ಅನುಮೋದನೆಯು ಮಹತ್ವದ ಹೆಜ್ಜೆಯಾಗುವ ಮೂಲಕ ಕರಾವಳಿಯ ಮೂಲಸೌಕರ್ಯ ಸುಧಾರಣೆಗೆ ಹೆಚ್ಚಿನ ಬಲ ದೊರೆಯಲಿದೆ.
























