ಬೆಂಗಳೂರು : ವಿಧಾನಸೌಧ ಮುಂದೆ ಸ್ಥಾಪಿಸಿರುವ ಸಮಾಜ ಪರಿವರ್ತಕ, ಜಗಜ್ಯೋತಿ ಬಸವೇಶ್ವರ ಹಾಗೂ ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಅನಾವರಣ ಕಾರ್ಯಕ್ರಮ ಮಾ. 26ರ ಸಂಜೆ 6.30ಕ್ಕೆ ನಡೆಯಲಿದ್ದು, ಕೇಂದ್ರ ಸಚಿವ ಅಮಿತ್ ಶಾ ಅವರು ಪ್ರತಿಮೆ ಅನಾವರಣ ಮಾಡಲಿದ್ದಾರೆ.
ವಿಧಾನಸೌಧದ ಆವರಣದಲ್ಲಿರುವ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು ಹಾಗೂ ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಪುತ್ಥಳಿ ಮಧ್ಯಭಾಗದಲ್ಲಿ ಈ ಇಬ್ಬರೂ ಮಹಾನೀಯರ ನಾಲ್ಕು ಮೀಟರ್ ಎತ್ತರದ ಅಶ್ವಾರೂಢ ಪ್ರತಿಮೆಗಳ ಸ್ಥಾಪನೆಯಾಗಲಿದ್ದು, ರೂ. 8 ಕೋಟಿ ವೆಚ್ಚದಲ್ಲಿ ಪ್ರತಿಮೆ ಸಿದ್ಧಗೊಂಡಿದೆ.
ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಅನೇಕ ಸಚಿವರು, ಶಾಸಕರು, ಸುತ್ತೂರು ಮಠದ ಶಿವರಾತ್ರಿ ದೇಶೀ ಕೇಂದ್ರ ಸ್ವಾಮೀಜಿ, ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ಸಿದ್ದಗಂಗಾಮಠದ ಸಿದ್ದಲಿಂಗ ಸ್ವಾಮೀಜಿ, ಮಾದಾರ ಪೀಠದ ಬಸವಮೂರ್ತಿ ಮಾದಾರ ಚನ್ನಯ್ಯ ಸ್ವಾಮೀಜಿ, ಗುರುಗುಂಡಮಠದ ನಂಜಾವಧೂತ ಸ್ವಾಮೀಜಿ, ವಿಶ್ವ ಒಕ್ಕಲಿಗರ ಮಹಾಸಂಸ್ಥಾನದ ಕುಮಾರ ಚಂದ್ರಶೇಖರನಾಥ ಸ್ವಾಮೀಜಿ ಅವರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆಂದು ತಿಳಿದುಬಂದಿದೆ.