ಎರಡನೇ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ಗೆ 7 ವಿಕೆಟ್‌ಗಳ ಅಮೋಘ ಜಯ
ರಾಜ್‌ಕೋಟ್: ರಾಜ್‌ಕೋಟ್‌ನಲ್ಲಿ ನಡೆದ ಎರಡನೇ ಏಕದಿನ ಪಂದ್ಯದಲ್ಲಿ ಡೇರಿಯಲ್ ಮಿಚೆಲ್ ಮತ್ತು ವಿಲ್ ಯಂಗ್ ಶತಕದ ಜೊತೆಯಾಟ ನೆರವಿನಿಂದ ಭಾರತದ ವಿರುದ್ಧ ನ್ಯೂಜಿಲೆಂಡ್ 7 ವಿಕೆಟ್‌ಗಳ ಅಮೋಘ ಜಯ ಸಾಧಿಸಿದೆ. ಈ ಮೂಲಕ 3 ಪಂದ್ಯಗಳ ಏಕದಿನ ಸರಣಿ 1-1 ರಲ್ಲಿ ಸಮಬಲಗೊಂಡಿದೆ.
ನಿರಂಜನ್ ಶಾ ಕ್ರೀಡಾಂಗಣದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಮಾಡಿದ ಭಾರತ ಕೆ.ಎಲ್.ರಾಹುಲ್ ಅವರ ಶತಕದ ನೆರವಿನಿಂದ 7 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿತ್ತು. 285 ರನ್‌ಗಳ ಗುರಿ ಬೆನ್ನಟ್ಟಿದ ಕಿವೀಸ್ 47.3 ಓವರ್‌ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 286 ರನ್ ಗಳಿಸಿ ಗೆಲುವು ಸಾಧಿಸಿತು.
ಚೇಸಿಂಗ್ ಆರಂಭಿಸಿದ ಕಿವೀಸ್‌ಗೆ ಭಾರತ ಆರಂಭದಲ್ಲೇ ಆಘಾತ ನೀಡಿತು. 12.4 ಓವರ್‌ಗಳಲ್ಲಿ ಕೇವಲ 46 ರನ್ ಗಳಿಸಿದ ನ್ಯೂಜಿಲೆಂಡ್ ಆರಂಭಿಕ 2 ವಿಕೆಟ್‌ಗಳನ್ನು ಕಳೆದುಕೊಂಡಿತ್ತು. ಆದರೆ 3ನೇ ವಿಕೆಟ್‌ಗೆ ಜೊತೆಯಾದ ವಿಲ್ ಯಂಗ್ ಹಾಗೂ ಡೇರಿಯಲ್ ಮಿಚೆಲ್ ಟೀಂ ಇಂಡಿಯಾ ಬೌಲರ್‌ಗಳನ್ನ ಕಾಡಿದರು. 152 ಎಸೆತಗಳಲ್ಲಿ ಈ ಜೋಡಿ 162 ರನ್‌ಗಳ ಜೊತೆಯಾಟ ನೀಡಿತು. ಡೇರಿಲ್ ಮಿಚೆಲ್ 2 ಬಾರಿ ಕ್ಯಾಚ್ ಕೊಟ್ಟರೂ ವಿಫಲವಾಗಿದ್ದು, ಟೀಂ ಇಂಡಿಯಾಕ್ಕೆ ನುಂಗಲಾರದ ತುತ್ತಾಯಿತು.
ಮಧ್ಯಮ ಕ್ರಮಾಂಕದಲ್ಲಿ ಕ್ರೀಸ್‌ಗಿಳಿದ ಡೇರಿಯಲ್ ಮಿಚೆಲ್ ಅರ್ಧಶತಕ ಗಳಿಸಿದ ಬಳಿಕ ಲಾಂಗ್ ಆಫ್‌ನಲ್ಲಿ ಮತ್ತೊಮ್ಮೆ ಲಾಂಗ್ ಆನ್‌ನಲ್ಲಿ ಕ್ಯಾಚ್ ಕೊಟ್ಟಿದ್ದರು. ಆದ್ರೆ 2 ಬಾರಿಯೂ ಟೀಂ ಇಂಡಿಯಾ ಕ್ಯಾಚ್ ಕೈಚೆಲ್ಲಿತು. ಈ ಅವಕಾಶವನ್ನು ಸದುಪಯೋಗ ಪಡಿಸಿಕೊಂಡ ಡೇರಿಯಲ್ ಮಿಚೆಲ್ ತಾಳ್ಮೆಯ ಆಟವಾಡುತ್ತಾ ತಂಡವನ್ನು ಗೆಲುವಿನತ್ತ ಕೊಂಡೊಯ್ದರು. ಕೊನೆಯವರೆಗೂ ಅಜೇಯರಾಗುಳಿದ ಮಿಚೆಲ್ 117 ಎಸೆತಗಳಲ್ಲಿ 131 ರನ್ (11 ಬೌಂಡರಿ, 2 ಸಿಕ್ಸರ್) ಬಾರಿಸಿದರು. ಇದರೊಂದಿಗೆ ವಿಲ್ ಯಂಗ್ 87 ರನ್ (98 ಎಸೆತ, 7 ಬೌಂಡರಿ), ಗ್ಲೆನ್ ಫ್ಲಿಲಿಪ್ಸ್ 32 ರನ್, ಡಿವೋನ್ ಕಾನ್ವೆ 16 ರನ್, ಹೆನ್ರಿ ನಿಕೋಲ್ಸ್ 10 ರನ್ ಕೊಡುಗೆ ನೀಡಿದರು.
ಇದಕ್ಕೂ ಮುನ್ನ ಬ್ಯಾಟಿಂಗ್ ಮಾಡಿದ ಭಾರತದ ಪರ ಕೆ.ಎಲ್ ರಾಹುಲ್ ಅಮೋಘ ಶತಕದೊಂದಿಗೆ ಸ್ಪರ್ಧಾತ್ಮಕ ಮೊತ್ತ ಕಲೆಹಾಕಿತ್ತು. ವಡೋದರಾದಲ್ಲಿ ನ್ಯೂಜಿಲೆಂಡ್ ವಿರುದ್ಧ ತಾಳ್ಮೆಯ ಆಟವಾಡಿ ಭಾರತ ತಂಡವನ್ನ ಗೆಲುವಿನ ದಡ ಸೇರಿಸಿದ್ದ ಕನ್ನಡಿಗ ಕೆ.ಎಲ್ ರಾಹುಲ್ ರಾಜ್‌ಕೋಟ್‌ನಲ್ಲೂ ಶತಕ ಸಿಡಿಸಿ ಮಿಂಚಿದರು. ಭಾರತದ ಮಧ್ಯಮ ಕ್ರಮಾಂಕ ಕುಸಿದ ಸಮಯದಲ್ಲಿ ಸಮಯೋಚಿತ ಬ್ಯಾಟಿಂಗ್ ಪ್ರದರ್ಶನ ನೀಡಿದ ರಾಹುಲ್ ಟೀಂ ಇಂಡಿಯಾದ ಮಾನ ಕಾಪಾಡಿದರು. ಹೀಗಾಗಿ ಅಂತಿಮವಾಗಿ ಭಾರತ ನಿಗದಿತ 50 ಓವರ್‌ಗಳು ಮುಗಿದಾಗ 7 ವಿಕೆಟ್ ನಷ್ಟಕ್ಕೆ 284 ರನ್ ಗಳಿಸಿತು.
ಎಂದಿಗಿಂತ ನಿಧಾನಗತಿಯಲ್ಲಿ ಆಡಿದ ರೋಹಿತ್ ಶರ್ಮಾ 38 ಎಸೆತಗಳಲ್ಲಿ 24 ರನ್ ಗಳಿಸಿ ಔಟಾದರು. ಇದಾದ ಬಳಿಕ ಶುಭಮನ್ ಗಿಲ್ ಮತ್ತು ವಿರಾಟ್ ಕೊಹ್ಲಿ ತಂಡದ ಇನ್ನಿಂಗ್ಸ್ ಆಧರಿಸಿದರು. ಗಿಲ್ 53 ಎಸೆತದಿಂದ 9 ಬೌಂಡರಿ ಮತ್ತು 1 ಸಿಕ್ಸರ್ ಗಳನ್ನು ಒಳಗೊಂಡ 56 ರನ್ ಗಳಿಸಿರು. ಮಾಜಿ ನಾಯಕ ವಿರಾಟ್ ಕೊಹ್ಲಿ 29 ಎಸೆತಗಳಿಂದ 23 ರನ್ ಗಳಿಸಿದರು. ಮಧ್ಯಮ ಕ್ರಮಾಂಕದಲ್ಲಿ ಶ್ರೇಯಸ್ ಅಯ್ಯರ್ (17 ಎಸತೆದಲ್ಲಿ 8 ರನ್) ಮತ್ತು ರವೀಂದ್ರ ಜಡೇಜಾ (44 ಎಸೆತದಲ್ಲಿ 27 ರನ್) ರನ್ ಗಳಿಕೆ ನಿಧಾನವಾಗಿದ್ದು ತಂಡದ ಸ್ಕೋರ್ ಮೇಲೂ ಪರಿಣಾಮ ಬೀರಿತು.
ಸ್ಲಾಗ್ ಓವರ್‌ಗಳಲ್ಲಿ ಕೆ.ಎಲ್ ರಾಹುಲ್ ಈ ಕೊರತೆ ನೀಗಿಸಿದರು. 87 ಎಸೆತಗಳಲ್ಲಿ 100 ರನ್ ಪೂರೈಸಿದ ಅವರು ಅಂತಿಮವಾಗಿ 92 ಎಸೆತಗಳಿಂದ ಅಜೇಯ 112 ರನ್ ಬಾರಿಸಿದರು. ವಾಶಿಂಗ್ಟನ್ ಸುಂದರ್ ಬದಲಿಗೆ ಕಣಕ್ಕಿಳಿದ ನಿತೀಶ್ ಕುಮಾರ್ ರೆಡ್ಡಿ 21 ಎಸೆತದಲ್ಲಿ 20 ರನ್ ಗಳಿಸಿ ಕೆ.ಎಲ್ ರಾಹುಲ್‌ಗೆ ಉತ್ತಮ ಸಾಥ್ ನೀಡಿದರು. ಇವರಿಬ್ಬರು 6ನೇ ವಿಕೆಟ್‌ಗೆ 57 ರನ್‌ಗಳ ಜೊತೆಯಾಟ ಆಡಿದ್ದು ಮಹತ್ವದ್ದೆನಿಸಿತು.
ಕಿವೀಸ್ ಈ ಪಂದ್ಯವನ್ನು ಗೆಲ್ಲಲು ಪ್ರಮುಖ ಕಾರಣ ಡ್ಯಾರಿಲ್ ಮಿಚೆಲ್ ಮತ್ತು ವಿಲ್ ಯಂಗ್ ಅವರ ಜೊತೆಯಾಟ ಒಂದೆಡೆಯಾದರೆ, ಭಾರತೀಯ ಬೌಲರ್‌ಗಳ ಕಳಪೆ ಬೌಲಿಂಗ್ ಮತ್ತೊಂದು ಕಾರಣವಾಯಿತು. ವಿಶೇಷವಾಗಿ ಕುಲದೀಪ್ ಯಾದವ್ ಮಧ್ಯಮ ಓವರ್‌ಗಳಲ್ಲಿ ತುಂಬಾ ದುಬಾರಿಯಾದರು. 10 ಓವರ್‌ಗಳಲ್ಲಿ 82 ರನ್‌ಗಳನ್ನು ಬಿಟ್ಟುಕೊಟ್ಟರು. ಮೊಹಮ್ಮದ್ ಸಿರಾಜ್ ಮತ್ತು ರವೀಂದ್ರ ಜಡೇಜಾ ಹೆಚ್ಚಿನ ಪರಿಣಾಮ ಬೀರುವಲ್ಲಿ ವಿಫಲರಾದರು.
























