ರಸ್ತೆಯಲ್ಲಿ ಸಿಕ್ಕಿದ 45 ಲ.ರೂ. ಮೌಲ್ಯದ ಚಿನ್ನ ಮರಳಿಸಿ ಪ್ರಾಮಾಣಿಕತೆ ಮೆರೆದ ಮಹಿಳೆ

ಬಡ ಪೌರ ಕಾರ್ಮಿಕ ಮಹಿಳೆಯ ಪ್ರಾಮಾಣಿಕತೆಗೆ ಮುಖ್ಯಮಂತ್ರಿಯಿಂದಲೇ ಮೆಚ್ಚುಗೆ

ಚೆನ್ನೈ : ರಸ್ತೆಯಲ್ಲಿ ಒಂದು ರೂಪಾಯಿ ನಾಣ್ಯ ಬಿದ್ದು ಸಿಕ್ಕಿದರೂ ಮೆಲ್ಲಗೆ ಜೇಬಿಗಿಳಿಸುವವರ ನಡುವೆ ಪೌರ ಕಾರ್ಮಿಕ ಮಹಿಳೆಯೊಬ್ಬರು ರಸ್ತೆಯಲ್ಲಿ ಬಿದ್ದಿದ್ದ ಸುಮಾರು 45 ಲ. ರೂ. ಮೌಲ್ಯದ ಆಭರಣವನ್ನು ವಾರೀಸುದಾರರಿಗೆ ಮರಳಿಸಿ ಅಪೂರ್ವವಾದ ಪ್ರಾಮಾಣಿಕತೆ ಮೆರೆದಿದ್ದಾರೆ.

ನಗರದಲ್ಲಿ ಕಸ ಸ್ವಚ್ಛಗೊಳಿಸುವ ವೇಳೆ ರಸ್ತೆ ಬದಿಯಲ್ಲಿ ಬಿದ್ದಿದ್ದ ಬರೋಬ್ಬರಿ 45 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೊಲೀಸರಿಗೆ ಒಪ್ಪಿಸಿ ಪೌರ ಕಾರ್ಮಿಕ ಮಹಿಳೆಯೊಬ್ಬರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಪೊಲೀಸರ ತನಿಖೆಯ ಬಳಿಕ ಈ ಬಂಗಾರದ ಗಂಟು ಅದರ ಅಸಲಿ ಮಾಲೀಕರಿಗೆ ಮರಳಿದೆ.





















































 
 

ಗ್ರೇಟರ್ ಚೆನ್ನೈ ಕಾರ್ಪೊರೇಷನ್‌ನಲ್ಲಿ ಪೌರಕಾರ್ಮಿಕರಾಗಿ ಕೆಲಸ ಮಾಡುತ್ತಿರುವ ಪದ್ಮಾ ಎಂಬ ಮಹಿಳೆ ಭಾನುವಾರ ಬೆಳಗ್ಗೆ ಟಿ.ನಗರದ ಮುಪ್ಪತ್ತಮ್ಮನ್ ಕೋವಿಲ್ ರಸ್ತೆಯಲ್ಲಿ ಎಂದಿನಂತೆ ಕಸ ಗುಡಿಸುವ ಕೆಲಸದಲ್ಲಿ ತೊಡಗಿದ್ದಾಗ ರಸ್ತೆ ಬದಿಯಲ್ಲಿ ಬಿದ್ದಿದ್ದ ಒಂದು ಪ್ಲಾಸ್ಟಿಕ್ ಕವರ್ ಅವರ ಗಮನ ಸೆಳೆದಿದೆ. ಅನುಮಾನದಿಂದ ಅದನ್ನು ತೆರೆದು ನೋಡಿದಾಗ ಒಳಗೆ ಚಿನ್ನದ ಆಭರಣಗಳಿರುವುದು ಕಂಡುಬಂದಿದೆ. ಇದರಿಂದ ಅಚ್ಚರಿಗೊಂಡ ಪದ್ಮಾ ತಕ್ಷಣವೇ ಪಾಂಡಿ ಬಜಾರ್ ಪೊಲೀಸ್ ಠಾಣೆಗೆ ತೆರಳಿ ಆ ಚೀಲವನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ.

ಪೊಲೀಸರು ಚೀಲವನ್ನು ಪರಿಶೀಲಿಸಿದಾಗ ಅದರಲ್ಲಿ ಸುಮಾರು ಸುಮಾರು 360 ಗ್ರಾಂ ಚಿನ್ನದ ಆಭರಣಗಳಿರುವುದು ಪತ್ತೆಯಾಗಿದೆ. ಇದರ ಅಂದಾಜು ಮಾರುಕಟ್ಟೆ ಮೌಲ್ಯ 45 ಲಕ್ಷ ರೂಪಾಯಿಗಳಿಗೂ ಅಧಿಕ ಎಂದು ತಿಳಿದುಬಂದಿದೆ. ಇದೇ ಸಮಯದಲ್ಲಿ ನಂಗನಲ್ಲೂರು ನಿವಾಸಿ ರಮೇಶ್ ಎಂಬವರು ತಮ್ಮ 45 ಸವರನ್ ಅಂದರೆ 360 ಗ್ರಾಂ ಚಿನ್ನ ನಾಪತ್ತೆಯಾಗಿರುವುದಾಗಿ ಪೊಲೀಸರಿಗೆ ದೂರು ನೀಡಿದ್ದರು. ಹಳೆ ಚಿನ್ನದ ವ್ಯಾಪಾರಿಯಾಗಿರುವ ರಮೇಶ್, ಶನಿವಾರ ಸಂಜೆ ಟಿ.ನಗರಕ್ಕೆ ಸ್ನೇಹಿತನನ್ನು ಭೇಟಿಯಾಗಲು ಬಂದಾಗ ರಸ್ತೆ ಬದಿಯ ತಳ್ಳುಗಾಡಿಯ ಬಳಿ ಚಿನ್ನದ ಚೀಲವನ್ನು ಇಟ್ಟು ಮರೆತು ಹೋಗಿದ್ದರು. ಪೊಲೀಸರು ದೂರು ಹಾಗೂ ಇತರ ದಾಖಲೆಗಳನ್ನು ಪರಿಶೀಲಿಸಿ, ರಮೇಶ್ ಅವರೇ ಚಿನ್ನದ ಅಸಲಿ ಮಾಲೀಕರು ಎಂದು ಖಚಿತಪಡಿಸಿಕೊಂಡು, ಬಂಗಾರದ ಆಭರಣಗಳನ್ನು ಅವರಿಗೆ ಹಸ್ತಾಂತರಿಸಿದರು.

ಪೌರಕಾರ್ಮಿಕ ಮಹಿಳೆ ಪದ್ಮಾ ಅವರ ಈ ಅಪರೂಪದ ಪ್ರಾಮಾಣಿಕತೆ ಸಾರ್ವಜನಿಕ ವಲಯದಲ್ಲಿ ಭಾರೀ ಮೆಚ್ಚುಗೆಗೆ ಪಾತ್ರವಾಗಿದೆ. ಪೊಲೀಸರು, ಪ್ರಾಮಾಣಿಕತೆ ಎನ್ನುವುದು ಮಾತಲ್ಲ, ಅದು ಜೀವನದ ಮೌಲ್ಯ ಎಂದು ಪದ್ಮಾ ಅವರನ್ನು ಅಭಿನಂದಿಸಿದ್ದಾರೆ. ಅವರ ನಿಷ್ಠೆಯನ್ನು ಗೌರವಿಸಿ, ಸ್ವತಃ ಮುಖ್ಯಮಂತ್ರಿಗಳೇ ಪದ್ಮಾ ಅವರನ್ನು ಸನ್ಮಾನಿಸಿದ್ದಾರೆ.

error: Content is protected !!
Scroll to Top