ಭಾರತದ ಆತ್ಮ ಧರ್ಮ ಮತ್ತು ಸಂಸ್ಕೃತಿ: ಶ್ರೀಕಾಂತ್ ಶೆಟ್ಟಿ ಕಾರ್ಕಳ

ವಿವೇಕಾನಂದ ಕಾಲೇಜು ಆವರಣದಲ್ಲಿ ಮೊಳಗಿತು ಮೈ ನವಿರೇಳಿಸುವ ರಾಷ್ಟ್ರ ಭಕ್ತಿಯ ಅಲೆ

ಪುತ್ತೂರು: ಭಾರತದ ಆತ್ಮ ಧರ್ಮ ಮತ್ತು ಸಂಸ್ಕೃತಿ. ಇವುಗಳ ಮೇಲೆ ದಾಳಿ ನಡೆದಾಗೆಲ್ಲ ದೇಶ ಜಾಗೃತವಾಗಿದೆ. ಪ್ರಸ್ತುತ ಭಾರತೀಯತೆಯ ಪುನರುತ್ಥಾನದ ಜೊತೆಗೆ ದೇಶದ ಅತಃಶಕ್ತಿ ಜಾಗೃತವಾಗುತ್ತಿದ್ದು, ನಾವೆಲ್ಲರೂ ಬದಲಾವಣೆಗೆ ತೆರೆದುಕೊಳ್ಳುತ್ತಿರುವ ಪರಂಪರೆಗೆ ಸಾಕ್ಷಿಗಳಾಗುತ್ತಿದ್ದೇವೆ ಎಂದು ಹಿಂದೂ ಜಾಗರಣ ವೇದಿಕೆಯ ಕರ್ನಾಟಕ ದಕ್ಷಿಣ ಪ್ರಾಂತ ಪ್ರಮುಖ್ ಶ್ರೀಕಾಂತ್ ಶೆಟ್ಟಿ ಕಾರ್ಕಳ ಹೇಳಿದರು.

ಅವರು ಪುತ್ತೂರಿನ ವಿವೇಕಾನಂದ ವಿದ್ಯಾವರ್ಧಕ ಸಂಘದ ಆಶ್ರಯದಲ್ಲಿ ನಡೆದ ವಿವೇಕಾನಂದ ಜಯಂತಿಯ ಕಾರ್ಯಕ್ರಮ ‘ಯುವ ಜನತೆ ಮತ್ತು ದೇಶ ಭಕ್ತಿ’ ಎಂಬ ಪರಿಕಲ್ಪನೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.





















































 
 

ವಿಶ್ವಕ್ಕೆ ಮೃತ್ಯುಂಜಯ ತತ್ವವನ್ನು ಭಾರತ ಪರಿಚಯಿಸಿದೆ. ಭಾರತದ ಅಮರಗಾಥೆಗೆ ಸೋಮನಾಥ ಮಂದಿರದ ಪುನಃನಿರ್ಮಾಣ ಸಾಕ್ಷಿ. RSS ಗೆ 100 ವರ್ಷ, ವಂದೇ ಮಾತರಂ ಗೀತೆಗೆ 150 ವರ್ಷ ಎನ್ನುವುದು ಈ ದೇಶದ ಜೀವಂತಿಕೆಗೆ ಸ್ಪಷ್ಟ ನಿದರ್ಶನ. ಸ್ವಾತಂತ್ರ್ಯ ಪೂರ್ವದಲ್ಲಿ ಖುದಿರಾಮ್ ಬೋಸ್, ಪ್ರೀತಿಲತಾ ವಡ್ಡದಾ‌ರ್, ಬಿಪಿನ್ ಚಂದ್ರಪಾಲ್ ಅಂತಹ ಕ್ರಾಂತಿಕಾರಿಗಳಿಗೆ ವಿವೇಕಾನಂದರ ಸಾಹಿತ್ಯವೇ ಭಾರತೀಯರಿಗೆ ಸ್ಫೂರ್ತಿಯಾಗಿತ್ತು. ಇಂದು ಸಂಘವು ಯುವಕರನ್ನು ಬಲಿಷ್ಠಗೊಳಿಸುವ ಕೆಲಸ ಮಾಡುತ್ತಿದೆ. ನಾವು ನಮ್ಮತನವನ್ನು ಜಾಗೃತಗೊಳಿಸಿ, ಸಮಾಜವನ್ನು ಗಟ್ಟಿಗೊಳಿಸಬೇಕು ಎಂದರಲ್ಲದೆ, ಬಂಗಾಳದ ಹಿಂದೂಗಳ ಪರವಾಗಿ ನಿಲ್ಲುವ ಕಾರ್ಯವಾಗಬೇಕು ಎಂದು ಅವರು ಕರೆ ಕೊಟ್ಟರು.

ಅಧ್ಯಕ್ಷತೆ ವಹಿಸಿದ್ದ ಕಲ್ಲಡ್ಕ ಪ್ರಭಾಕರ ಭಟ್ ಅವರು ಮಾತನಾಡಿ, ಭಾರತದ ನಿಜವಾದ ಪರಂಪರೆಯನ್ನು ಮರೆತು ಆತ್ಮವಿಸ್ಮೃತಿಯಲ್ಲಿರುವವರಿಗೆ ದಾರಿ ತೋರಿಸಿದವರು ಸ್ವಾಮಿ ವಿವೇಕಾನಂದರು. ರಕ್ತಪಾತ ಮಾಡದೆ ಆಧ್ಯಾತ್ಮಿಕ ಚಿಂತನೆಯ ಮೂಲಕ ಜಗತ್ತನ್ನೇ ಗೆಲ್ಲುವುದು ‌ಸಾಧ್ಯ ಎಂಬುದನ್ನು ತೋರಿಸಿಕೊಟ್ಟವರು ಕೇಸರಿ ಸಂತ ಎಂದು ತಿಳಿಸಿದರು.

ಪ್ರಸ್ತುತ ಅಲ್ಪಸಂಖ್ಯಾತರ ಹೆಸರಿನಲ್ಲಿ ಅನ್ಯಾಯ ನಡೆಯುತ್ತಿದೆ. ಜಾತಿ ಗಣತಿ ಹೆಸರಿನಲ್ಲಿ ಹಿಂದೂಗಳನ್ನು ಒಡೆಯುವ ಕೆಲಸ ನಡೆಯುತ್ತಿದೆ. ಬ್ರಿಟೀಷರ ವಿರುದ್ಧ ಹೋರಾಟ ಮಾಡಲು ಭಾರತೀಯರಿಗೆ ವಂದೇ ಮಾತರಂ ಹಾಡಿಗೆ ಸ್ಫೂರ್ತಿ ತುಂಬಿದ್ದು ವಿವೇಕಾನಂದರ ನುಡಿಗಳು. ನಮ್ಮ ಸಂಸ್ಕೃತಿ ಎಲ್ಲರಿಗೂ ಒಳಿತನ್ನೇ ಬಯಸುವುದಾಗಿದೆ ಎಂದು ಅವರು ಅಭಿಪ್ರಾಯ ವ್ಯಕ್ತಪಡಿಸಿದರು.

ವಂದೇ ಮಾತರಂ ಗೀತೆಯ 150ನೇ ವರ್ಷಾಚರಣೆಯ ಪ್ರಯುಕ್ತ ಪುತ್ತೂರಿನ ವಿವೇಕಾನಂದ ವಿದ್ಯಾಸಂಸ್ಥೆಗಳ ವಿವಿಧ ವಿಭಾಗದ ಸುಮಾರು 10 ಸಾವಿರ ಹಾಗೂ ಗ್ರಾಮಾಂತರ ಶಾಲೆಗಳ 10 ಸಾವಿರ ಸೇರಿ ಒಟ್ಟು 20 ಸಾವಿರ ವಿದ್ಯಾರ್ಥಿಗಳು ಏಕಕಾಲದಲ್ಲಿ ದೇಶಭಕ್ತಿ ಗೀತೆಗಳನ್ನು ಹಾಡಿದರು. ‘ತಾಯಿ ಭಾರತಿಯ ಪಾದ ಪದ್ಮಗಳ ಪೂಜಿಸೋಣ ಬನ್ನಿ’, ‘ಸದ್ವಿಚಾರ ಧಾರೆಯಿಂದ ಚಿಮ್ಮಲಿ ಸ್ಫೂರ್ತಿ’, ‘ದೇಶ ದೇಶ ದೇಶ ನನ್ನದು”, ‘ಹಿಂದುತ್ವದ ಜಯಘೋಷವ ಮೊಳಗಿಸಿ’ ಹಾಗೂ ‘ವಂದೇ ಮಾತರಂ’ ಗೀತೆಗಳು ಕೇಳುಗರನ್ನು ರೋಮಾಂಚನಗೊಳಿಸಿದವು.

ಇದೇ ಸಂದರ್ಭದಲ್ಲಿ RSS ನೂರನೇ ವರ್ಷದ ನೆನಪಿಗಾಗಿ ‘ಸಂಘ ಶತಾಬ್ಧಿ’ ಪರಿಕಲ್ಪನೆಯಡಿ ಸಂಘ ನಡೆದು ಬಂದ ಹಾದಿಯನ್ನು ಬಿಂಬಿಸುವ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಂಸ್ಥೆಯ ವಿದ್ಯಾರ್ಥಿಗಳು ಪ್ರದರ್ಶಿಸಿದರು.

ಸಂಘದ ಪದಾಧಿಕಾರಿಗಳು, ಶಿಕ್ಷಕರು ಹಾಗೂ ಪೋಷಕರು ಉಪಸ್ಥಿತರಿದ್ದರು.

ವಿವೇಕಾನಂದ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಡಾ. ಕೃಷ್ಣ ಭಟ್ ಸ್ವಾಗತಿಸಿ, ಪ್ರಾಸ್ತಾವಿಸಿದರು. ಪಾಲಿಟೆಕ್ನಿಕ್ ಉಪನ್ಯಾಸಕಿ ಉಷಾಕಿರಣ್ ನಿರೂಪಿಸಿದರು. ಉಪಾಧ್ಯಕ್ಷ ಸತೀಶ್‌ ರಾವ್ ವಂದಿಸಿದರು.

error: Content is protected !!
Scroll to Top