ಬೆಂಗಳೂರಿನಿಂದ ಮಂಗಳೂರಿಗೆ ಮಾದಕವಸ್ತು ಪೂರೈಸುತ್ತಿದ್ದ ಜಾಲದ ಪ್ರಮುಖ ಸೂತ್ರಧಾರಿ ಮಹಿಳೆ
ಮಂಗಳೂರು: ಬೆಂಗಳೂರಿನಿಂದ ಮಂಗಳೂರಿಗೆ ವ್ಯವಸ್ಥಿತ ರೀತಿಯಲ್ಲಿ ಮಾದಕ ದ್ರವ್ಯ ಎಂಡಿಎಂಎ ಸರಬರಾಜು ಮಾಡುತ್ತಿದ್ದ ಉಗಾಂಡ ಮೂಲದ ಮಹಿಳೆಯನ್ನು ಮಂಗಳೂರು ಸಿಸಿಬಿ ಪೊಲೀಸರು ಬೆಂಗಳೂರಿನಲ್ಲಿ ಬಂಧಿಸಿ ಅವಳಿಂದ ಸುಮಾರು 4 ಕೋ. ರೂ. ಮೌಲ್ಯದ 4 ಕೆಜಿ ಡ್ರಗ್ಸ್ ವಸ್ತು ವಶಪಡಿಸಿಕೊಂಡಿದ್ದಾರೆ.
ಬೆಂಗಳೂರಿನ ಹೊರವಲಯದ ಜಿಗಾನಿಯಲ್ಲಿ 4 ಕೆಜಿ ಎಂಡಿಎಂಎ ಜೊತೆ ಮಹಿಳೆ ಸಿಕ್ಕಿಬಿದ್ದಿದ್ದಾಳೆ. ಆರೋಪಿಯನ್ನು ಜಲಿಯಾ ಝಲ್ವಾಂಗೊ ಎಂದು ಗುರುತಿಸಲಾಗಿದ್ದು, ವಶಪಡಿಸಿಕೊಂಡ ಅಕ್ರಮ ವಸ್ತುಗಳ ಮೌಲ್ಯ ಸುಮಾರು 4 ಕೋಟಿ ರೂ. ಎಂದು ಅಂದಾಜಿಸಲಾಗಿದೆ.
ಆರೋಪಿಯನ್ನು ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯ ಆಕೆಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿಚಾರಣೆಗಾಗಿ ಆಕೆಯನ್ನು ಪೊಲೀಸ್ ಕಸ್ಟಡಿಗೆ ತೆಗೆದುಕೊಳ್ಳಲಾಗುವುದು ಎಂದು ಪೊಲೀಸ್ ಆಯುಕ್ತರು ತಿಳಿಸಿದ್ದಾರೆ.
ಈ ಬಂಧನದೊಂದಿಗೆ, ಮಂಗಳೂರಿಗೆ ಪ್ರಮುಖ ಮಾದಕವಸ್ತು ಪೂರೈಕೆ ಮಾಡುತ್ತಿದ್ದ ಜಾಲವನ್ನು ಭೇದಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಈ ಹಿಂದೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಆರು ಮಾದಕವಸ್ತು ಮಾರಾಟಗಾರರನ್ನು ಬಂಧಿಸಲಾಗಿತ್ತು ಮತ್ತು ಪ್ರಸ್ತುತ ಅವರು ನ್ಯಾಯಾಂಗ ಬಂಧನದಲ್ಲಿದ್ದಾರೆ.
























