ಬೆಂಗಳೂರು: ಆಂಧ್ರಪ್ರದೇಶದ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಿಂದ ಇಸ್ರೋ ಉಡಾವಣೆ ಮಾಡಿದ PSLV – C62 ರಾಕೆಟ್ ಹಾರಾಟದ ಕೊನೆಯ ಹಂತದಲ್ಲಿ ತಾಂತ್ರಿಕ ವ್ಯತ್ಯಯಗಳು ಕಂಡುಬಂದಿರುವುದಾಗಿ ತಿಳಿದು ಬಂದಿದೆ.
ಈ ಬಗ್ಗೆ ವಿವರವಾದ ವಿಶ್ಲೇಷಣೆಗೆ ಇಸ್ರೋ ವಿಜ್ಞಾನಿಗಳು ಮುಂದಾಗಿದ್ದಾರೆ. ಆರಂಭಿಕ ಹಂತಗಳಲ್ಲಿ ರಾಕೆಟ್ ಯಶಸ್ವಿ ಹಾರಾಟ ನಡೆಸಿದೆ. ಆದರೆ ಮೂರನೇ ಹಂತದ ಕೊನೆಯಲ್ಲಿ ನಿರೀಕ್ಷಿತ ಪಥದಲ್ಲಿ ಹಾರಾಟ ನಡೆದಿಲ್ಲ ಎಂದು ಸಂಸ್ಥೆ ಮಾಹಿತಿ ನೀಡಿದೆ. ಈ ಹಿನ್ನೆಲೆ ಉಡಾವಣೆಯ ನಂತರದ ಟೆಲಿಮೆಟ್ರಿ ಮಾಹಿತಿ ಪರಿಶೀಲನೆ ನಡೆಸಲಾಗುವುದಾಗಿಯೂ ಹೇಳಿದೆ.
2026ರ ಮೊದಲ ಬಾಹ್ಯಾಕಾಶ ಮಿಷನ್ ಆಗಿದ್ದPSLV-C62, ಇಸ್ರೋನ 101ನೇ ಕಕ್ಷಾ ಉಡಾವಣೆಯ ಗುರಿಯನ್ನೂ ಹೊಂದಿತ್ತು. ಈ ರಾಕೆಟ್ DRDO ಅಭಿವೃದ್ಧಿಪಡಿಸಿದ EOS-N1 ಭೂಪರಿವೀಕ್ಷಣಾ ಉಪಗ್ರಹ ಸೇರಿದಂತೆ 15 ದೇಶಿ ಮತ್ತು ವಿದೇಶಿ ಉಪಗ್ರಹಗಳನ್ನು ಹೊತ್ತೊಯ್ದಿತ್ತು.
260 ಟನ್ ತೂಕ ಮತ್ತು 44 ಮೀಟರ್ ಎತ್ತರ ಹೊಂದಿರುವ PSLV-C62, ಸುಮಾರು 505 ಕಿಲೋಮೀಟರ್ ಎತ್ತರದ ಸೂರ್ಯ-ಸಮಸಮಯ ಕಕ್ಷೆಯಲ್ಲಿ ಉಪಗ್ರಹಗಳನ್ನು ಸ್ಥಾಪಿಸುವ ಯೋಜನೆ ಹೊಂದಿತ್ತು. ಮಿಷನ್ ಪ್ರಗತಿಯ ಅಂತಿಮ ಸ್ಥಿತಿಯನ್ನು ಇಸ್ರೋ ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆ ಇದೆ.
























