ಬೆಂಗಳೂರು: ಯುವತಿಯನ್ನು ಕೆಲವು ಯುವಕರು ಚುಡಾಯಿಸುತ್ತಿದ್ದಾಗ, ಅಸಭ್ಯ ಬಟ್ಟೆ ಧರಿಸಿ ರಸ್ತೆಗೆ ಬರಬೇಡಮ್ಮ ಎಂದು ಬುದ್ಧಿ ಹೇಳಿದ ಹೋಂ ಗಾರ್ಡ್ ಮೇಲೆಯೇ ಆಕೆ ಹಲ್ಲೆ ನಡೆಸಿದ ಘಟನೆ ಕೆ. ಆರ್. ಪುರಂ ರೈಲ್ವೆ ನಿಲ್ದಾಣದ ಬಳಿ ನಡೆದಿದ್ದು ಆರೋಪಿಯನ್ನು ರಾಮಮೂರ್ತಿ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಆರೋಪಿಯನ್ನು ಮೋಹಿನಿ ಎಂದು ಗುರುತಿಸಲಾಗಿದ್ದು, ಗಾಯಾಳು ಹೋಂ ಗಾರ್ಡ್ ಲಕ್ಷ್ಮೀ ನರಸಮ್ಮ ಸದ್ಯ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ 12 ವರ್ಷಗಳಿಂದ ಲಕ್ಷ್ಮೀ ನರಸಮ್ಮ ಹೋಂ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಕಳೆದ ಆರು ತಿಂಗಳಿಂದ ಕೆ. ಆರ್. ಪುರಂ ವ್ಯಾಪ್ತಿಯಲ್ಲಿ ಟ್ರಾಫಿಕ್ ನಿಯಂತ್ರಣ ಸೇವೆ ಮಾಡುತ್ತಿದ್ದರು. ಯುವತಿ ರಸ್ತೆಯಲ್ಲಿ ಹೋಗುತ್ತಿದ್ದ ಸಮಯದಲ್ಲಿ ಆಕೆಯನ್ನು ಕೆಲವು ಯುವಕರು ಚುಡಾಯಿಸಿದ್ದಾರೆ. ಈ ಸಂದರ್ಭದಲ್ಲಿ ಲಕ್ಷ್ಮೀ ನರಸಮ್ಮ ಯುವತಿಗೆ ಸಭ್ಯ ಬಟ್ಟೆ ಧರಿಸುವಂತೆ ಬುದ್ಧಿ ಮಾತು ಹೇಳಿದ್ದಾರೆ. ಈ ಹಿಂದೆಯೂ ಆ ಯುವತಿ ಕುಡಿದು ಅಲೆದಾಡುತ್ತಿದ್ದು, ಆಕೆಗೆ ಬುದ್ಧಿ ಹೇಳುವಂತೆ ಹೋಂ ಗಾರ್ಡ್ಗೆ ಸಾರ್ವಜನಿಕರು ಸಹ ಮನವಿ ಮಾಡಿದ್ದರು. ಅದರಂತೆ ಅವರು ಬುದ್ಧಿ ಹೇಳಿದ್ದು, ತಕ್ಷಣವೇ ಆಕೆ ಅವರ ಮೇಲೆ ನನಗೆ ಹೇಳಲು ನೀನು ಯಾರು ಎಂದು ಹಲ್ಲೆ ನಡೆಸಿದ್ದಾಳೆ. ಸಾರ್ವಜನಿಕರು ಗಲಾಟೆ ಬಿಡಿಸಲು ಬಂದಾಗಲೂ ಸುಮ್ಮನಾಗದೆ ಕ್ರೌರ್ಯ ಮೆರೆದಿದ್ದಾಳೆ.
ಈ ಬಗ್ಗೆ ಗಾಯಾಳು ಮಾತನಾಡಿದ್ದು, ತಪ್ಪು ಮಾಡಿದವರಿಗೆ ಶಿಕ್ಷೆಯಾಗಬೇಕು. ಕರ್ತವ್ಯದಲ್ಲಿರುವ ನಮ್ಮಂತವರಿಗೆ ರಕ್ಷಣೆ ಸಿಗಬೇಕು ಎಂದು ಹೇಳಿದ್ದಾರೆ.
























