ಭಾರತಕ್ಕೆ ನುಗ್ಗಲು ಯತ್ನಿಸಿದ 5ಕ್ಕೂ ಅಧಿಕ ಡ್ರೋನ್‌ಗಳನ್ನು ಹೊಡೆದುರುಳಿಸಿದ ಸೇನೆ
ನವದೆಹಲಿ: ಸಾವಿರಕ್ಕೂ ಹೆಚ್ಚು ಆತ್ಮಹತ್ಯಾ ಬಾಂಬರ್‌ಗಳು ಸಿದ್ಧರಿದ್ದಾರೆ ಮತ್ತು ಭಾರತಕ್ಕೆ ನುಸುಳಲು ಅವಕಾಶ ನೀಡುವಂತೆ ತನ್ನ ಮೇಲೆ ಒತ್ತಡ ಹೇರುತ್ತಿದ್ದಾರೆ ಎಂದು ಪಾಕಿಸ್ತಾನದ ಭಯೋತ್ಪಾದಕ ಸಂಘಟನೆ ಜೈಶ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಅಜರ್ ಹೇಳಿದ ಆಡಿಯೋ ಸಂದೇಶವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕ ವೈರಲ್ ಆಗಿದ್ದು, ಇದರ ಬೆನ್ನಲ್ಲೇ ಜಮ್ಮು ಮತ್ತು ಕಾಶ್ಮೀರದ ನೌಶೇರಾ ಸೆಕ್ಟರ್‌ನಲ್ಲಿ ಗಡಿ ನಿಯಂತ್ರಣ ರೇಖೆ ಬಳಿ ಭಾನುವಾರ ಸಂಜೆ ಪಾಕಿಸ್ತಾನದ ಡ್ರೋನ್‌ಗಳ ಹಾರಾಟ ಪತ್ತೆಯಾಗಿದೆ.
ಭಾರತೀಯ ಯೋಧರು ಈ ಡ್ರೋನ್‌ಗಳನ್ನು ಗುಂಡು ಹಾರಿಸಿ ಹೊಡೆದುರುಳಿಸಿದ್ದು, ಇನ್ನೂ ಹಲವಾರು ಡ್ರೋನ್‌ಗಳು ಗಡಿ ದಾಟಿ ಬಂದಿವೆ ಎನ್ನಲಾಗಿದೆ. ಕಳೆದ ವರ್ಷ ಆಪರೇಷನ್ ಸಿಂಧೂರ ಸಂದರ್ಭದಲ್ಲಿ ಬರುತ್ತಿದ್ದ ಡ್ರೋನ್‌ನಂತೆ ಆಕಾಶದಲ್ಲಿ ಮಿನುಗುತ್ತಾ ಡ್ರೋನ್‌ಗಳು ಪಾಕ್ ಆಕ್ರಮಿತ ಕಾಶ್ಮೀರ ಭಾರತದ ಗಡಿಭಾಗದೊಳಕ್ಕೆ ನುಗ್ಗಲು ಯತ್ನಿಸಿವೆ.
ಭಾರತೀಯ ಸೇನಾ ಯೋಧರು ಎಲ್ಲ ಡ್ರೋನ್‌ಗಳನ್ನು ಆಗಸದಲ್ಲೇ ಯಶಸ್ವಿಯಾಗಿ ಹೊಡೆದುರುಳಿಸಿದ್ದು, ಅವು ಹೊತ್ತು ತಂದಿರಬಹುದಾದ ಶಸ್ತ್ರಾಸ್ತ್ರಗಳು ಅಥವಾ ಮಾದಕವಸ್ತುಗಳ ಹುಡುಕಾಟದಲ್ಲಿ ನಿರತವಾಗಿದ್ದಾರೆ.
ನಿನ್ನೆ, ಪಾಕ್ ಆಕ್ರಮಿತ ಕಾಶ್ಮೀರ ದಿಕ್ಕಿನಿಂದ ಬಂದ ಡ್ರೋನ್ ಸಾಂಬಾ ಸೆಕ್ಟರ್‌ನಲ್ಲಿ ಶಸ್ತ್ರಾಸ್ತ್ರಗಳನ್ನು ಹೊತ್ತು ತಂದಿದ್ದವು. ಮಷಿನ್ ಗನ್‌ಗಳು ಈ ಡ್ರೋನ್‌ಗಳಲ್ಲಿ ಇದ್ದವು ಎಂದು ಸೇನೆ ಹೇಳಿದೆ. ರಾಜೌರಿ ಜಿಲ್ಲೆಯಲ್ಲಿ ಸಂಜೆ 6.35ಕ್ಕೆ ಮತ್ತೊಂದು ಡ್ರೋನ್ ಕಾಣಿಸಿಕೊಂಡಿದ್ದು, ಮಿನುಗುವ ಬೆಳಕನ್ನು ಹೊಂದಿರುವ ಹಾರುವ ವಸ್ತು ಕಲಕೋಟ್‌ನ ಧರ್ಮಸಾಲ್ ಗ್ರಾಮದಿಂದ ಬಂದು ಭರಖ್ ಕಡೆಗೆ ಚಲಿಸಿದೆ. ಮತ್ತೊಂದು ಡ್ರೋನ್ 7.15ರ ಸುಮಾರಿಗೆ ಸಾಂಬಾದ ರಾಮಗಢ ಸೆಕ್ಟರ್‌ನಲ್ಲಿ ಚಕ್ ಬಾಬ್ರಾಲ್ ಗ್ರಾಮದ ಮೇಲೆ ಕೆಲವು ನಿಮಿಷಗಳ ಕಾಲ ಹಾರಾಟ ನಡೆಸಿದೆ ಎಂದು ಭಾರತೀಯ ಸೇನೆ ಮಾಹಿತಿ ನೀಡಿದೆ.
ಸಂಜೆ 6.25ಕ್ಕೆ ಪೂಂಛ್ ಜಿಲ್ಲೆಯ ಮಂಕೋಟೆ ಸೆಕ್ಟರ್‌ನ ಟೋಪಾ ಕಡೆಗೆ ಮತ್ತೊಂದು ಪಾಕ್ ಡ್ರೋನ್ ಚಲನೆ ಕಂಡುಬಂದಿದೆ.ಈ ಎಲ್ಲ ಡ್ರೋನ್‌ಗಳನ್ನು ಮಷಿನ್ ಗನ್‌ಗಳಿಂದ ಹೊಡೆದುರುಳಿಸಲಾಗಿದ್ದು, ಅವು ಹೊತ್ತು ತಂದಿರಬಹುದಾದ ವಸ್ತುಗಳ ಶೋಧ ಕಾರ್ಯ ಮುಂದುವರಿದಿದೆ ಎಂದು ಸೇನಾ ಮೂಲಗಳು ತಿಳಿಸಿವೆ.
ಕಳೆದ ವರ್ಷ ಆಪರೇಷನ್ ಸಿಂಧೂರ್ ಸಮಯದಲ್ಲಿ ಭಾರತ ಹಲವಾರು ಪಾಕಿಸ್ತಾನಿ ಡ್ರೋನ್‌ಗಳನ್ನು ಹೊಡೆದುರುಳಿಸಿತ್ತು. ಅದರ ನಂತರ ಡ್ರೋನ್ ನುಗ್ಗುವಿಕೆ ತೀವ್ರವಾಗಿ ಕಡಿಮೆಯಾಗಿತ್ತು. ಆದಾಗ್ಯೂ ಭಾನುವಾರ ಸಂಜೆ ಒಂದೇ ದಿನದಲ್ಲಿ ಐದು ಪಾಕಿಸ್ತಾನಿ ಡ್ರೋನ್ ಗಡಿಯೊಳಗೆ ನುಗ್ಗಲು ಯತ್ನಿಸಿರುವುದಾಗಿ ವರದಿಯಾಗಿದೆ.
























