ವರ್ಷದ ಮೊದಲ ಗೆಲುವಿನೊಂದಿಗೆ ಟೀಮ್‌ ಇಂಡಿಯಾ ಶುಭಾರಂಭ

7 ರನ್‌ಗಳಿಂದ ಶತಕ ಮಿಸ್‌ ಮಾಡಿಕೊಂಡ ಕೊಹ್ಲಿ

ವಡೋದರ: ವರ್ಷದ ಮೊದಲ ಅಂತಾರಾಷ್ಟ್ರೀಯ ಪಂದ್ಯವನ್ನು ಗೆದ್ದುಕೊಳ್ಳುವ ಮೂಲಕ ಭಾರತ ಶುಭಾರಂಭ ಮಾಡಿದೆ. ವಡೋದರದ ಬಿಸಿಎ ಮೈದಾನದಲ್ಲಿ ನಿನ್ನೆ ನಡೆದ ಪ್ರಥಮ ಏಕದಿನ ಪಂದ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೀಂ ಇಂಡಿಯಾ 4 ವಿಕೆಟ್‌ಗಳ ಜಯ ಸಾಧಿಸಿದೆ. ಆ ಮೂಲಕ 3 ಪಂದ್ಯಗಳ ಸರಣಿಯಲ್ಲಿ 1-0 ಅಂತರದ ಮುನ್ನಡೆ ಕಾಯ್ದುಕೊಂಡಿದೆ.

ಸುಮಾರು 15 ವರ್ಷಗಳ ನಂತರ ವಡೋದರದಲ್ಲಿ ಏಕದಿನ ಪಂದ್ಯವನ್ನಾಡಿದ ಟೀಮ್ ಇಂಡಿಯಾ ಮತ್ತೊಮ್ಮೆ ವಿರಾಟ್ ಕೊಹ್ಲಿ ಅವರ ಅದ್ಭುತ ಬ್ಯಾಟಿಂಗ್‌ನಿಂದ 301 ರನ್‌ಗಳ ಗುರಿಯನ್ನು ಇನ್ನೊಂದು ಓವರ್ ಬಾಕಿ ಇರುವಂತೆಯೇ ಬೆನ್ನಟ್ಟಿ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿತು. ಆದಾಗ್ಯೂ ಕೊಹ್ಲಿ ಕೇವಲ 7 ರನ್​ಗಳಿಂದ ಶತಕ ವಂಚಿತರಾದರೂ ತಂಡದ ಗೆಲುವಿಗೆ ಅಡಿಪಾಯ ಹಾಕಿದರು.





















































 
 

ಮೊದಲು ಬ್ಯಾಟಿಂಗ್ ಮಾಡಿದ ನ್ಯೂಜಿಲೆಂಡ್ 50 ಓವರ್‌ಗಳಲ್ಲಿ 8 ವಿಕೆಟ್‌ಗಳ ನಷ್ಟಕ್ಕೆ 300 ರನ್ ಗಳಿಸಿತು. ತಂಡಕ್ಕೆ ಉತ್ತಮ ಆರಂಭ ಒದಗಿಸಿಕೊಟ್ಟ ಆರಂಭಿಕ ಜೋಡಿ ಹೆನ್ರಿ ನಿಕೋಲ್ಸ್ ಮತ್ತು ಡೆವೊನ್ ಕಾನ್ವೇ 21 ಓವರ್‌ಗಳಲ್ಲಿ 117 ರನ್‌ಗಳ ಜೊತೆಯಾಟ ಹಂಚಿಕೊಂಡರು. ಇದರ ಜೊತೆಗೆ ಇಬ್ಬರೂ ಅರ್ಧಶತಕವನ್ನು ಪೂರೈಸಿದರು. ಹರ್ಷಿತ್ ರಾಣಾ ಈ ಪಾಲುದಾರಿಕೆಯನ್ನು ಮುರಿಯುವಲ್ಲಿ ಯಶಸ್ವಿಯಾದರು. ಈ ಇಬ್ಬರ ವಿಕೆಟ್ ಪತನದ ಬಳಿಕ ಒಂದು ತುದಿಯಲ್ಲಿ ಸ್ಥಿರವಾಗಿ ನಿಂತ ಡ್ಯಾರಿಲ್ ಮಿಚೆಲ್ ಕೂಡ ಭಾರತದ ವಿರುದ್ಧ ಮತ್ತೊಂದು ಅರ್ಧಶತಕ ಪೂರೈಸಿದರು.

ಶತಕದಂಚಿನಲ್ಲಿ ಎಡವಿದ ಮಿಚೆಲ್ 84 ರನ್ ಗಳಿಸಿ ಔಟಾದರು. ಕೊನೆಯ ಓವರ್‌ನಲ್ಲಿ, ಟೈಲ್‌ ಎಂಡರ್‌ಗಳು 14 ರನ್ ಗಳಿಸಿ ತಂಡದ ಮೊತ್ತವನ್ನು 300 ರನ್​ಗಳಿಗೆ ಕೊಂಡೊಯ್ದರು. ಭಾರತ ಪರ ಸಿರಾಜ್, ಹರ್ಷಿತ್ ಮತ್ತು ಪ್ರಸಿದ್ಧ್ ಕೃಷ್ಣ ತಲಾ ಎರಡು ವಿಕೆಟ್ ಪಡೆದರು. ಅತ್ಯಂತ ಪರಿಣಾಮಕಾರಿಯಾಗಿ ಬೌಲಿಂಗ್ ಮಾಡಿದ ಸಿರಾಜ್ ಎಂಟು ಓವರ್‌ಗಳಲ್ಲಿ ಕೇವಲ 40 ರನ್‌ ನೀಡಿ ಎರಡು ವಿಕೆಟ್‌ಗಳನ್ನು ಪಡೆದರು.

ಈ ಗುರಿ ಬೆನ್ನಟ್ಟಿದ ಭಾರತಕ್ಕೆ ಸಾಧಾರಣ ಆರಂಭ ಸಿಕ್ಕಿತು. ಮಾಜಿ ನಾಯಕ ರೋಹಿತ್ ಶರ್ಮಾ ಎರಡು ಸಿಕ್ಸರ್‌ ಮತ್ತು ಬೌಂಡರಿಯೊಂದಿಗೆ 26 ರನ್​ಗಳಿಗೆ ವಿಕೆಟ್ ಒಪ್ಪಿಸಿದರು. ನಾಯಕ ಶುಭ್​ಮನ್ ಗಿಲ್ ರನ್ ಗಳಿಸಲು ಹೆಣಗಾಡುತ್ತಿದ್ದ ಸಮಯದಲ್ಲಿ ಕ್ರೀಸ್‌ಗೆ ಬಂದ ವಿರಾಟ್ ಕೊಹ್ಲಿ ತಕ್ಷಣವೇ ಬೌಂಡರಿಗಳನ್ನು ಹೊಡೆಯಲು ಪ್ರಾರಂಭಿಸಿ ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 28,000 ರನ್​ಗಳನ್ನು ಪೂರ್ಣಗೊಳಿಸಿದರು. ಮಾತ್ರವಲ್ಲದೆ ಗಿಲ್ ಜೊತೆಗೆ 118 ರನ್‌ಗಳ ಜೊತೆಯಾಟವನ್ನು ಹಂಚಿಕೊಂಡರು. ಆದರೆ ನಾಯಕ ಶುಭ್​ಮನ್ ಗಿಲ್ ಅರ್ಧಶತಕ ಬಾರಿಸಿ ಔಟಾಗುವ ಮೂಲಕ ಈ ಜೊತೆಯಾಟ ಅಂತ್ಯವಾಯಿತು.

ಗಿಲ್ ವಿಕೆಟ್ ಪತನದ ಬಳಿಕವೂ ತಮ್ಮ ಎಂದಿನ ಆಟವನ್ನು ಮುಂದುವರಿಸಿದ ಕೊಹ್ಲಿ ಅರ್ಧಶತಕವನ್ನು ಪೂರೈಸಿದರು. ಕೊಹ್ಲಿ ಜೊತೆಗೂಡಿದ ಶ್ರೇಯಸ್ ಅಯ್ಯರ್ ತಂಡವನ್ನು 200 ರನ್​ಗಳ ಗಡಿ ದಾಟಿಸಿದರು. ಕೊಹ್ಲಿಯ ಶತಕ ಮತ್ತು ಟೀಮ್ ಇಂಡಿಯಾದ ಗೆಲುವು ಖಚಿತವೆಂದು ತೋರುತ್ತಿದ್ದ ಸಮಯದಲ್ಲೇ ತಂಡದ ವಿಕೆಟ್ ಪತನ ಶುರುವಾಯಿತು. ಇದಕ್ಕೆ ನಾಂದಿ ಹಾಡಿದ ವಿರಾಟ್ ಕೊಹ್ಲಿ 93 ರನ್‌ಗಳಿಸಿ ಜೇಮಿಸನ್​ಗೆ ವಿಕೆಟ್ ಒಪ್ಪಿಸಿದರು. ಅದೇ ಓವರ್​ನಲ್ಲಿ ಜಡೇಜಾ ಔಟಾದರೆ, ಅರ್ಧಶತಕದಂಚಿನಲ್ಲಿದ್ದ ಶ್ರೇಯಸ್ ಕೂಡ ಜೇಮಿಸನ್‌ಗೆ ಬಲಿಯಾದರು. ಸತತ ವಿಕೆಟ್​ಗಳ ಪತನದಿಂದ ಟೀಂ ಇಂಡಿಯಾ ಸಂಕಷ್ಟದಲ್ಲಿ ಸಿಲುಕಿದಂತೆ ಕಂಡುಬಂದಿತು. ಕೆ.ಎಲ್ ರಾಹುಲ್ ಮತ್ತು ಹರ್ಷಿತ್ ರಾಣಾ 37 ರನ್‌ಗಳ ಜೊತೆಯಾಟವನ್ನಾಡುವ ಮೂಲಕ ತಂಡವನ್ನು ಗೆಲುವಿನ ಸಮೀಪಕ್ಕೆ ತಂದರು. ನಂತರ ರಾಹುಲ್ ಅಂತಿಮವಾಗಿ ಸಿಕ್ಸ್ ಬಾರಿಸಿ 49 ಓವರ್‌ಗಳಲ್ಲಿ ತಂಡವನ್ನು ಗೆಲುವು ತಂದಿತ್ತರು.

error: Content is protected !!
Scroll to Top