ಅಲುಂಬುಡ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ವಾರ್ಷಿಕ ಕಾರ್ಯಕ್ರಮ
ಪುತ್ತೂರು: ಬನ್ನೂರಿನ ಕೃಷ್ಣನಗರ ಸಮೀಪದ ಅಲುಂಬುಡದಲ್ಲಿರುವ ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್‌ನಲ್ಲಿ ವಾರ್ಷಿಕ ಕಾರ್ಯಕ್ರಮವಾಗಿ ಚಿಣ್ಣರೋತ್ಸವ ಜ.2ರಂದು ಶಾಲಾ ವಠಾರದಲ್ಲಿ ನಡೆಯಿತು. ಪ್ರತಿಭಾ ಪುರಸ್ಕಾರ, ಸನ್ಮಾನ ಮುಂತಾದ ಕಾರ್ಯಕ್ರಮಗಳೊಂದಿಗೆ ವಿದ್ಯಾರ್ಥಿಗಳ ಪ್ರತಿಭೆ ಅನಾವರಣಗೊಂಡಿತು.
ವಿದ್ಯಾಭ್ಯಾಸದ ಜೊತೆಗೆ ಸಂಸ್ಕಾರ ಕೊಡುವ ಶಾಲೆ
ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮನೆಯೇ ಮೊದಲ ಪಾಠ ಶಾಲೆ, ತಾಯಿಯೇ ಮೊದಲ ಗುರು ಎಂಬಂತೆ ತಾಯಂದಿರು ಮನಸು ಮಾಡಿದರೆ ಏನೂ ಮಾಡಬಹುದು. ಈ ನಿಟ್ಟಿನಲ್ಲಿ ತಾಯಂದಿರು ತಮ್ಮ ಮಕ್ಕಳನ್ನು ಉತ್ತಮ ವಿದ್ಯಾಸಂಸ್ಥೆಗೆ ಕಳುಹಿಸಿರುವುದು ಸಂತೋಷ ಆಗಿದೆ. ಜೀವನ ರೂಪಿಸಲು ವಿದ್ಯಾಭ್ಯಾಸ ಇರಬೇಕೆ ಹೊರತು ಅದು ಮಕ್ಕಳಿಗೆ ಸ್ಪರ್ಧೆಯಾಗಬಾರದು. ನಮ್ಮ ದೇಶಕ್ಕೆ 3 ಸಾವಿರ ವರ್ಷ ಪರಕೀಯರ ದಾಳಿಯಾದರೂ ಭಾರತ ಸೋಲದಿರಲು ಕಾರಣ ನಮ್ಮ ಕುಟುಂಬ ಪದ್ಧತಿ. ಈ ನಿಟ್ಟಿನಲ್ಲಿ ವಿವಿಜಿ ಶಾಲೆಯಲ್ಲಿ ವಿದ್ಯಾರ್ಥಿಗಳು ಸಂಸ್ಕಾರಯುತವಾಗಿ ಹೊರಬರಲಿದ್ದಾರೆ ಎಂದರು.
ದನ ಮೇಯಿಸುತ್ತಿದ್ದ ಗುಡ್ಡೆಯಲ್ಲಿ ಇಂದು ಸ್ಕೂಲ್ ನಿರ್ಮಾಣ ಆಗಿದೆ. ಕನಸಿನಲ್ಲೂ ಎಣಿಸದ್ದು ನನಸಾಗಿದೆ. ನಮ್ಮ ಹಿರಿಯರ ತುಡಿತ ಸಾರ್ಥಕವಾಗಿದೆ. ನನ್ನ ತಾಯಿ ಅನಕ್ಷರಸ್ಥೆಯಾದರೂ ನಮಗೆ ವಿದ್ಯಾಭ್ಯಾಸ ಕೊಟ್ಟು ನಮ್ಮನ್ನು ಸಮಾಜ ಸೇವೆಗೆ ಅರ್ಪಣೆ ಮಾಡಿದ್ದಾರೆ. ಈ ಸ್ಕೂಲನ್ನು ಕುಟುಂಬದ ಮೂಲಕ ಮಾಡಿ 3 ಎಕ್ರೆ ಜಾಗ ಮೀಸಲಿಡಲಾಗಿದೆ. ಮೊದಲ ವರ್ಷ ಎಲ್‌ಕೆಜಿ, ಯುಕೆಜಿ ಆರಂಭಗೊಂಡು 6ನೇ ತರಗತಿಯ ತನಕ ಮುಂದುವರಿದಿದೆ. ಮುಂದಿನ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿಯನ್ನು ಆರಂಭಿಸಲಿದ್ದೇವೆ. ಭಾರತೀಯ ಸಂಸ್ಕೃತಿ, ಸಂಸ್ಕಾರದ ಗುರಿಯನ್ನು ಇಟ್ಟುಕೊಂಡು ಶಿಕ್ಷಣವನ್ನು ಮುಂದಿಟ್ಟಿದ್ದೇವೆ ಎಂದು ಎವಿಜಿ ಇಂಗ್ಲಿಷ್ ಮೀಡಿಯಂ ಸ್ಕೂಲ್ ಸಂಚಾಲಕ ಎ.ವಿ ನಾರಾಯಣ ತಿಳಿಸಿದರು.
























