ಶ್ರೀನಗರ: ಕಣಿವೆ ರಾಜ್ಯ ಜಮ್ಮು ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ಮತ್ತು ಪೊಲೀಸರ ಜಂಟಿ ಕಾರ್ಯಾಚರಣೆಯಲ್ಲಿ ದೊಡ್ಡ ಭಯೋತ್ಪಾದನಾ ಸಂಚೊಂದನ್ನು ವಿಫಲಗೊಳಿಸಲಾಗಿದೆ.
ಗುಪ್ತಚರ ಇಲಾಖೆಯ ಖಚಿತ ಮಾಹಿತಿಯ ಆಧಾರದಲ್ಲಿ ಈ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯದ ವೇಳೆ ಸುಮಾರು 4 ಕೆಜಿ ತೂಕದ ಸುಧಾರಿತ ಸ್ಫೋಟಕ ಸಾಧನವನ್ನು ಪತ್ತೆ ಮಾಡಿ ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಲಾಗಿದೆ.
ಭದ್ರತಾ ಪಡೆಗಳು ಕಲ್ಲಾರ್ ಪ್ರದೇಶದ ದಟ್ಟ ಕಾಡಿನಲ್ಲಿ ಅನುಮಾನಾಸ್ಪದ ಚಟುವಟಿಕೆಗಳ ವಾಸನೆ ಬಡಿದಿದ್ದು, ಈ ಹಿನ್ನೆಲೆ ತೀವ್ರ ಶೋಧ ನಡೆಸಿದ್ದವು. ಈ ವೇಳೆ ಬಂಡೆಗಳ ಮಧ್ಯೆ ಅನುಮಾನಾಸ್ಪದ ವಸ್ತು ಐಇಡಿ ಕಂಡು ಬಂದಿತ್ತು. ಅದನ್ನು ಭದ್ರತಾ ಪಡೆಗಳು ಯಶಸ್ವಿಯಾಗಿ ನಿಷ್ಕ್ರಿಯಗೊಳಿಸಿದೆ. ಈ ವಸ್ತು ಸ್ಫೋಟಗೊಂಡಿದ್ದರೆ ಭಾರೀ ಪ್ರಮಾಣದಲ್ಲಿ ಹಾನಿಯಾಗುವ ಸಾಧ್ಯತೆ ಇತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
























