ಖಿನ್ನತೆಯಿಂದ ಬಳಲುತ್ತಿದ್ದ ಸಾಫ್ಟ್‌ವೇರ್ ಇಂಜಿನಿಯರ್ ಯುವಕ
ಬೆಂಗಳೂರು : ನಗರದ ಅಪಾರ್ಟ್‌ಮೆಂಟ್ ಕಟ್ಟಡವೊಂದರ 16ನೇ ಫ್ಲೋರ್‌ನಿಂದ ಜಿಗಿದು ಮಂಗಳೂರು ಮೂಲದ ಟೆಕ್ಕಿಯೊಬ್ಬರು ಆತ್ನಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಮಂಗಳೂರು ಮೂಲದ ಸಾಫ್ಟ್‌ವೇರ್ ಇಂಜಿನಿಯರ್ ನಿಕ್ಷೇಪ್ ಬಂಗೇರ (26) ಸಾವಿಗೀಡಾಗಿರುವ ನತದೃಷ್ಟ ಯುವಕ.
ನಿಕ್ಷೇಪ್ ಬಗಲಗುಂಟೆಯ ಖಾಸಗಿ ಅಪಾರ್ಟ್‌ಮೆಂಟ್‌ನಲ್ಲಿ ವಾಸವಿದ್ದರು. ಅವರು 20ನೇ ಮಹಡಿಯ ಫ್ಲಾಟ್‌ನಲ್ಲಿ ವಾಸವಾಗಿದ್ದರು, ಆದರೆ ಬುಧವಾರ ಬೆಳಗ್ಗೆ 16ನೇ ಮಹಡಿಗೆ ಬಂದು ಅಲ್ಲಿಂದ ಕೆಳಗೆ ಜಿಗಿದಿದ್ದಾರೆ ಎಂದು ವರದಿಯಾಗಿದೆ.
ನಿಕ್ಷೇಪ್ ವರ್ಕ್ ಫ್ರಂ ಹೋಮ್ ಮಾಡುತ್ತಿದ್ದರು. ಅವರು ಸ್ಕಿಜೋಫ್ರೇನಿಯಾ ಕಾಯಿಲೆಯಿಂದ ಬಳಲುತ್ತಿದ್ದರು. ಈ ಸಂಬಂಧ ಬಗಲಗುಂಟೆಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮರಣೋತ್ತರ ಪರೀಕ್ಷೆಯ ನಂತರ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ನಿಕ್ಷೇಪ್ ಅವರು ವಿದೇಶದಲ್ಲಿ ಇಂಜಿನಿಯರಿಂಗ್ ಶಿಕ್ಷಣ ಮುಗಿಸಿ ನಂತರ ಬೆಂಗಳೂರಿನಲ್ಲಿ ಉದ್ಯೋಗಕ್ಕೆ ಸೇರಿದ್ದರು. ನಗರಕ್ಕೆ ಬಂದಾಗಿನಿಂದ ಅವರು ಬಗಲಗುಂಟೆಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ವಾಸವಿದ್ದರು. ಆರೋಗ್ಯ ಸಂಬಂಧಿತ ಸಮಸ್ಯೆಗಳಿಂದಾಗಿ ಅವರು ಮಾನಸಿಕ ಖಿನ್ನತೆಗೆ ಜಾರಿದ್ದರು ಎಂದು ಮೂಲಗಳಿಂದ ತಿಳಿದುಬಂದಿದೆ.
























