ಅವಹೇಳನಕ್ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಮುಖಂಡರು
ಬಂಟ್ವಾಳ: ಸುಳ್ಯದ ಬಿಜೆಪಿ ಶಾಸಕಿ ಭಾಗೀರಥಿ ಮುರುಳ್ಯ ಅವರಿಗೆ ಸಾಮಾಜಿಕ ಜಾಲತಾಣದಲ್ಲಿ ಅವಹೇಳನ ಮಾಡಿ ಪೋಸ್ಟ್ ಮಾಡಿರುವ ಕೃತ್ಯಕ್ಕೆ ಬಿಜೆಪಿ ನಾಯಕರಿಂದ ಭಾರಿ ಆಕ್ರೋಶ ವ್ಯಕ್ತವಾದ ಬಳಿಕ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಬಂಟ್ವಾಳ ತಾಲೂಕಿನ ಸದಾನಂದ ಎಂಬವರು ಜನವರಿ 7ರಂದು ತನ್ನ ಮೊಬೈಲ್‌ನ ಫೇಸ್ ಬುಕ್ ಖಾತೆಯನ್ನು ಗಮನಿಸಿದಾಗ ಬಿಲ್ಲವ ಸಂದೇಶ್ ಎಂಬ ಫೇಸ್‌ಬುಕ್ ಖಾತೆಯಲ್ಲಿ ಸುಳ್ಯ ವಿಧಾನಸಭಾ ಶಾಸಕಿ ಶಾಸಕ ಭಾಗೀರಥಿ ಮುರುಳ್ಯ ಅವರ ಫೋಟೊ ಹಾಕಿ ಶ್ರದ್ಧಾಂಜಲಿ ರೀತಿಯಲ್ಲಿ ಬರಹಗಳನ್ನು ಹಾಕಿರುವುದು ಗಮನಿಸಿದ್ದಾರೆ. ಭಾಗೀರಥಿ ಮುರುಳ್ಯ ಅವರ ಬಗ್ಗೆ ಅಪಪ್ರಚಾರವನ್ನು ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಮಾಡಲಾಗಿದೆ ಎಂದು ಅವರು ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿರುತ್ತಾರೆ.
ಸದಾನಂದ ಅವರ ದೂರಿನ ಮೇರೆಗೆ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರರ್ಜಿ ದಾಖಲಾಗಿರುತ್ತದೆ. ಈ ಬಗ್ಗೆ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು.
ಸಂಸದ ಕ್ಯಾ.ಬ್ರಿಜೇಶ್ ಚೌಟ, ಶಾಸಕರಾದ ವೇದವ್ಯಾಸ ಕಾಮತ್, ಉಮಾನಾಥ ಕೋಟ್ಯಾನ್, ಸುನಿಲ್ ಕುಮಾರ್ ಸಹಿತ ಬಿಜೆಪಿ ಮುಖಂಡರು ಭಾಗೀರಥಿ ಮುರುಳ್ಯ ಅವರಿಗೆ ಅವಹೇಳಿನ ಮಾಡಿರುವದನ್ನು ತೀಕ್ಷ್ಣವಾಗಿ ಖಂಡಿಸಿದ್ದಾರೆ.
ಶಾಸಕಿ ಭಾಗೀರಥಿ ಮುರುಳ್ಯ ಶೋಷಿತ ಸಮುದಾಯದಿಂದ ಬಂದು ಅತ್ಯಂತ ಸಜ್ಜನಿಕೆಯಿಂದ ಜನಸೇವೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಒಬ್ಬ ಜನಪ್ರತಿನಿಧಿಯ ಬಗ್ಗೆ, ಅದರಲ್ಲೂ ಮಹಿಳೆಯ ಬಗ್ಗೆ ಈ ರೀತಿಯಲ್ಲಿ ಕೀಳುಮಟ್ಟದ ಪೋಸ್ಟ್ ಹಾಕಿರುವುದು ಅತ್ಯಂತ ಖಂಡನೀಯ. ವಿವೇಚನೆ ಇಲ್ಲದ ಅಭಿವ್ಯಕ್ತಿ ಮತ್ತು ಸಂಸ್ಕಾರವಿಲ್ಲದ ಟೀಕೆಗಳನ್ನು ನಾಗರಿಕ ಸಮಾಜ ಎಂದಿಗೂ ಒಪ್ಪಲು ಸಾಧ್ಯವಿಲ್ಲ. ಅವು ವಿಕೃತ ಮನಸ್ಸಿನ ಕೆಟ್ಟ ಆಲೋಚನೆಗಳ ಅತಿರೇಕದ ವರ್ತನೆಯಾಗಿದೆ. ಜಾಲತಾಣದಲ್ಲಿ ಜನಪ್ರತಿನಿಧಿಗಳನ್ನು ಈ ರೀತಿ ತೇಜೋವಧೆ ಮಾಡಿರುವುದು ಅತ್ಯಂತ ಗಂಭೀರ ವಿಚಾರ ಎಂದು ಎಂದು ಕ್ಯಾ.ಬ್ರಿಜೇಶ್ ಚೌಟ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಮಾಜದ ಸ್ವಾಸ್ಥ್ಯ ಕೆಡಿಸುವ ಇಂತಹ ಪೋಸ್ಟ್‌ಗಳು ಕೇವಲ ಬೌದ್ಧಿಕ ದಿವಾಳಿತನವನ್ನು ತೋರಿಸುತ್ತವೆ. ಸಾಮಾಜಿಕ ಜಾಲತಾಣಗಳನ್ನು ಸದುಪಯೋಗಪಡಿಸಿಕೊಳ್ಳುವ ಬದಲು, ವ್ಯಕ್ತಿತ್ವ ಹರಣಕ್ಕೆ ಬಳಸುತ್ತಿರುವುದು ಅತ್ಯಂತ ವಿಷಾದನೀಯ ಎಂದು ಕ್ಯಾ. ಚೌಟ ಅವರು ಹೇಳಿದ್ದಾರೆ.
























