ಹೊಸಕೋಟೆ: ವ್ಯಕ್ತಿಯ ಮೃತ ದೇಹ ನೇಣು ಹಾಕಿಕೊಂಡ ಸ್ಥಿತಿಯಲ್ಲಿ ತಾಲೂಕಿನ ಮೈಲಾಪುರ ಗ್ರಾಮದ ಹೊರವಲಯದಲ್ಲಿ ಪತ್ತೆಯಾಗಿದೆ.
ಮಂಜುನಾಥ್ (44) ಎಂಬವರೇ ಮೃತ ವ್ಯಕ್ತಿ. ಮಹಿಳೆಯೊಬ್ಬರು ನಾಪತ್ತೆಯಾದ ಪ್ರಕರಣದಲ್ಲಿ ಪೊಲೀಸರು ಇವರಿಗೆ ಕಿರುಕುಳ ನೀಡಿದ್ದರು ಎನ್ನುವ ಆರೋಪ ಕೇಳಿ ಬಂದಿದೆ. ಅವರ ಶವ ತೋಟದ ಸಮೀಪ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದೆ.
ಅಶ್ವಿನಿ ಎಂಬ ಮಹಿಳೆ ತೋಟದ ಕೆಲಸಕ್ಕೆ ಬರುತ್ತಿದ್ದು, ಅವರು ಕಳೆದ ಎಂಟು ದಿನಗಳಿಂದ ನಾಪತ್ತೆಯಾಗಿದ್ದರು. ಈ ಸಂಬಂಧ ಪೊಲೀಸರು ಮಂಜುನಾಥ ಅವರನ್ನು ವಿಚಾರಣೆ ನಡೆಸಿದ್ದರು. ಮಹಿಳೆಯ ಜೊತೆಗೆ ಸಂಬಂಧದ ಆರೋಪದಲ್ಲಿ ಇವರ ವಿಚಾರಣೆ ನಡೆಸಲಾಗಿತ್ತು ಎನ್ನಲಾಗುತ್ತಿದೆ. ವಿಚಾರಣೆ ಮುಗಿಸಿ ಮನೆಗೆ ಬಂದ ಅವರು ಈ ಕೃತ್ಯ ಎಸಗಿದ್ದಾರೆ.
ತಮ್ಮ ತಂದೆಯ ಸಾವಿಗೆ ಪೊಲೀಸರೇ ಕಾರಣ ಎಂದು ಮಂಜುನಾಥ್ ಅವರ ಮಕ್ಕಳು ಆರೋಪಿಸಿದ್ದಾರೆ. ಕಾನ್ಸ್‌ಟೇಬಲ್ ಅಂಬರೀಶ್ ಅವರು ಕಿರುಕುಳ ನೀಡಿದ್ದಾರೆ ಮತ್ತು ಮಂಜುನಾಥ್ ಅವರನ್ನು ಕೊಲೆ ಮಾಡಿರುವ ಶಂಕೆ ಇದೆ ಎಂದು ಸಂಬಂಧಿಕರು ಆರೋಪಿಸಿದ್ದಾರೆ.
























