ಉಪ್ಪಿನಂಗಡಿ: ಹಳೆನೇರೆಂಕಿ ಗ್ರಾಮದ ಪಾತ್ರ ಮಾಡಿ ನಿವಾಸಿ ಗಂಗಾಧರ ಆಚಾರ್ಯ (64 ವರ್ಷ ) ಅವರು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ.
ಉಪ್ಪಿನಂಗಡಿಯಲ್ಲಿ ನಾಲ್ಕು ದಶಕಗಳಿಂದ ಕಮ್ಮಾರಿಕೆ ವೃತ್ತಿಯನ್ನು ಮಾಡುತ್ತಿದ್ದ ಇವರು ಕೆಲವು ತಿಂಗಳ ಹಿಂದೆ ಹೃದಯ ಸಂಬಂಧಿ ಕಾಯಿಲೆಯಿಂದ ಆಸ್ಪತ್ರೆಗೆ ದಾಖಲಾಗಿದ್ದರು. ಬಳಿಕ ಚಿಕಿತ್ಸೆ ಪಡೆದು ಚೇತರಿಸಿಕೊಂಡಿದ್ದರು. ಜನವರಿ 4ರಂದು ಮಂಗಳೂರಿನಲ್ಲಿ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದ್ದ ಅವರು ಅಸ್ವಸ್ಥಗೊಂಡಿದ್ದು, ತಕ್ಷಣವೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ.
ಮೃತರು ಪತ್ನಿ ಸವಿತ, ಪುತ್ರರಾದ ಮಹೇಶ್, ರಾಜೇಶ್, ಪುತ್ರಿ ಸೌಮ್ಯ, ಮೂವರು ಸಹೋದರರು, ನಾಲ್ವರು ಸಹೋದರಿಯರು ಮತ್ತು ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ಕಟೀಲು ಮೇಳದಲ್ಲಿ ಕಲಾವಿದರಾಗಿದ್ದ ದಿ. ಗಣಪತಿ ಆಚಾರ್ಯ ಅವರ ಪುತ್ರರಾದ ಅವರು ಕಲಾಭಿಮಾನಿ ಮತ್ತು ಕಲಾಪೋಷಕರಾಗಿದ್ದರು. ಗಂಗಾಧರ ಆಚಾರ್ಯ ಅವರ ನಿಧನಕ್ಕೆ ಉಪ್ಪಿನಂಗಡಿ ಶ್ರೀ ಕಾಳಿಕಾಂಬಾ ಯಕ್ಷಕಲಾ ಟ್ರಸ್ಟ್ (ರಿ.)ನ ಪದಾಧಿಕಾರಿಗಳು ಸಂತಾಪ ವ್ಯಕ್ತಪಡಿಸಿದ್ದಾರೆ.
























