ಪ್ರತಾಪ್‌ ಸಿಂಹ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗುವುದು ಪಕ್ಕಾ

ಚಾಮರಾಜ ಕ್ಷೇತ್ರದಿಂದ ಕಣಕ್ಕಿಳಿಯಲು ತಯಾರಿ

ಮೈಸೂರು: ಮಾಜಿ ಸಂಸದ ಪ್ರತಾಪ್ ಸಿಂಹ ರಾಜ್ಯ ರಾಜಕಾರಣಕ್ಕೆ ಎಂಟ್ರಿಯಾಗಲು ತೀರ್ಮಾನಿಸಿದ್ದಾರೆ. ಎರಡು ಬಾರಿ ಮೈಸೂರು-ಕೊಡಗು ಸಂಸದರಾಗಿದ್ದ ಅವರಿಗೆ 2024ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್ ಸಿಕ್ಕಿರಲಿಲ್ಲ. ಆದರೆ ಇದೀಗ ಪ್ರತಾಪ್ ಸಿಂಹ ರಾಷ್ಟ್ರ ರಾಜಕಾರಣ ಬಿಟ್ಟು ರಾಜ್ಯ ರಾಜಕಾರಣದತ್ತ ಹೆಜ್ಜೆ ಇಟ್ಟಿದ್ದಾರೆ. ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ರಾಜ್ಯ ರಾಜಕಾರಣಕ್ಕೆ ಪ್ರವೇಶಿಸುವ ಸುಳಿವು ನೀಡಿದ್ದಾರೆ. ಅಲ್ಲದೇ ತಮಗೆ ಯಾವ ಕ್ಷೇತ್ರದಿಂದ ಸ್ಪರ್ಧಿಸುವ ಒಲವಿದೆ ಎಂಬ ಕುರಿತೂ ಸಹ ಮಾಹಿತಿ ಬಿಚ್ಚಿಟ್ಟಿದ್ದಾರೆ. ಈ ಮೂಲಕ ಅವರ ಮುಂದಿನ ರಾಜಕೀಯ ಹಾದಿ ಕುರಿತು ಇದ್ದ ಕುತೂಹಲಕ್ಕೆ ತೆರೆ ಬಿದ್ದಿದೆ.

ರಾಜ್ಯ ರಾಜಕಾರಣಕ್ಕೆ ಯಾವಾಗ ಬರುತ್ತೀರಿ ಎಂಬ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿರುವ ಅವರು, ನಾನು ಈ ಹಿಂದೆಯೇ ಹಲವು ಬಾರಿ ಹೇಳಿದ್ದೇನೆ. ಕೇಂದ್ರಕ್ಕೆ ಹೋಗಿಲ್ಲ ಎಂದರೆ ರಾಜ್ಯದಲ್ಲಿ ಇರಲೇಬೇಕಲ್ಲವೇ ಎಂದಿದ್ದಾರೆ. ಈ ಮೂಲಕ ಕರ್ನಾಟಕ ರಾಜಕೀಯ ಎಂಟ್ರಿ ಬಗ್ಗೆ ತಿಳಿಸಿದ್ದಾರೆ. ಚಾಮರಾಜ ವಿಧಾನಸಭಾ ಕ್ಷೇತ್ರವನ್ನೇ ಏಕೆ ಆಯ್ಕೆ ಮಾಡಿಕೊಂಡಿದ್ದೀರಿ ಎಂದು ಮಾಧ್ಯಮದವರು ಕೇಳಿದಾಗ ಚಾಮರಾಜ ಹಣದ ಪ್ಯಾಕೇಟ್ ಕೊಟ್ಟು ಗೆಲ್ಲುವ ಕ್ಷೇತ್ರ ಅಲ್ಲ. ಇಲ್ಲಿಯ ಮತದಾರರು ಕೆಲಸ ನೋಡಿ ಪ್ರೀತಿ ತೋರಿಸುವ ಜನ. ಪ್ರಜ್ಞಾವಂತ ಬುದ್ಧಿವಂತರಿದ್ದಾರೆ. ಹೀಗಾಗಿ ಸಹಜವಾಗಿ ನನ್ನ ಆಯ್ಕೆಯಾಗಿದೆ ಎಂದು ಸ್ಪಷ್ಟಪಡಿಸಿದರು.





















































 
 

ಇಲ್ಲಿರುವ ನಮ್ಮ ಹಿತೈಷಿಗಳು ಎಲ್ಲರೂ ಚಾಮರಾಜ ಕ್ಷೇತ್ರದವರೇ ಆಗಿದ್ದಾರೆ. ಸದ್ಯ ಇಲ್ಲಿ ಕಾಂಗ್ರೆಸ್‌ ಶಾಸಕರಿದ್ದಾರೆ. ಆದರೆ, ಶಂಕರಲಿಂಗೇಗೌಡ ಅವರಂತಹ ಜನಪರ ವ್ಯಕ್ತಿ, ಸಮಾಜದ ಬಗ್ಗೆ ಕಾಳಜಿ ಹೊಂದಿದ್ದ ನಾಯಕನನ್ನು ಸತತವಾಗಿ 4 ಸಾರಿ ಗೆಲ್ಲಿಸಿರುವ ಕ್ಷೇತ್ರ ಇದಾಗಿದೆ. ಒಳ್ಳೆಯತನಕ್ಕೆ ಬೆಲೆ ಕೊಡುವ, ಮಣೆ ಹಾಕುವ ಕ್ಷೇತ್ರ ಇದು. ಹೀಗಾಗಿ ಸಹಜವಾಗಿಯೇ ಈ ಬಗ್ಗೆ ಯೋಜನೆ ಮಾಡಿದ್ದೇನೆ. ನಮ್ಮ ಕಾರ್ಯಕರ್ತರು, ಹಿತೈಷಿಗಳ ಅಪೇಕ್ಷೆಯೂ ಇದೇ ಆಗಿದೆ. ಸಾಧಕ, ಬಾಧಕಗಳನ್ನು ಯೋಚನೆ ಮಾಡಿ, ನಾನು ಕೂಡ ಚುನಾವಣೆಗೆ ಸಿದ್ಧತೆ ಆರಂಭಿಸುತ್ತೇನೆ ಎಂದು ಸ್ಪಷ್ಟಪಡಿಸಿದರು. ಈ ಮೂಲಕ 2028ರ ವಿಧಾನಸಭಾ ಚುನಾವಣೆಯಲ್ಲಿ ಚಾಮರಾಜ ಕ್ಷೇತ್ರದಿಂದ ಸ್ಪರ್ಧೆ ಮಾಡುವ ಬಗ್ಗೆ ಇಂಗಿತ ವ್ಯಕ್ತಪಡಿಸಿದ್ದಾರೆ.

ಈಗಾಗಲೇ ಪ್ರತಾಪ್ ಸಿಂಹ ಚಾಮರಾಜ ಕ್ಷೇತ್ರದಲ್ಲಿ ಕಾರ್ಯಚಟುವಟಿಕೆಗಳನ್ನು ಆರಂಭಿಸಿದ್ದಾರೆ. ಕ್ಷೇತ್ರದ ನಾಯಕರು, ಮುಖಂಡರು ಹಾಗೂ ಕಾರ್ಯಕರ್ತರನ್ನು ಭೇಟಿ ಮಾಡಿ ಚರ್ಚೆ ನಡೆಸಿದ್ದಾರೆ. ಕ್ಷೇತ್ರದ ಸಭೆ ಸಮಾರಂಭಕ್ಕೂ ಹಾಜರಾಗುತ್ತಿದ್ದಾರೆ. ಮತ್ತೊಂದು ಹೆಜ್ಜೆ ಮುಂದೆ ಹೋಗಿ ಕ್ಷೇತ್ರದ ಮುಖಂಡರ ಕಟುಂಬಸ್ಥರ ಜನ್ಮದಿನಕ್ಕೂ ಸಾಮಾಜಿಕ ಜಾಲತಾಣಗಳ ಮೂಲಕ ಶುಭಾಶಯ ಕೋರುವ ಮೂಲಕ ಗಮನಸೆಳೆಯುತ್ತಿದ್ದಾರೆ.

error: Content is protected !!
Scroll to Top