15-17 ವರ್ಷದ ನಾಲ್ಕು ಮಂದಿಯನ್ನು ಬಂಧಿಸಿದ್ದೇವೆ ಎಂದ ಗೃಹ ಸಚಿವ
ಬೆಂಗಳೂರು: ಬೆಂಗಳೂರಿನಲ್ಲಿ ಭಾನುವಾರ ರಾತ್ರಿ ಓಂ ಶಕ್ತಿ ಮಾಲಾಧಾರಿಗಳ ಮೆರವಣಿಗೆ ಮೇಲೆ ಕಲ್ಲೆಸೆದವರು ನಾಲ್ಕೈದು ಚಿಕ್ಕ ಹುಡುಗರು, ಅವರನ್ನೆಲ್ಲ ಬಂಧಿಸಲಾಗಿದೆ ಎಂದು ಗೃಹ ಸಚಿವ ಜಿ.ಪರಮೇಶ್ವರ್ ತಿಳಿಸಿದ್ದಾರೆ.
ಜೆಜೆಆರ್ ನಗರದ ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಓಂ ಶಕ್ತಿ ಮಾಲಾಧಾರಿಗಳ ಮೇಲೆ ನಾಲ್ಕೈದು 15-17 ವರ್ಷದವರು ಕಲ್ಲೆಸೆದಿದ್ದಾರೆ. ಎಲ್ಲರನ್ನೂ ಈಗಾಗಲೇ ಅವರನ್ನು ಬಂಧಿಸಲಾಗಿದೆ. ಇದು ಬಾಲಾಪರಾಧದ ವ್ಯಾಪ್ತಿಗೆ ಬರುತ್ತದೆ. ಪೊಲೀಸರು ಮುಂದಿನ ಕ್ರಮ ಕೈಗೊಳ್ಳುತ್ತಾರೆ ಎಂದರು.
ವಿಎಸ್ ಗಾರ್ಡನ್‌ನ ಓಂ ಶಕ್ತಿ ದೇವಸ್ಥಾನದ ಬಳಿ ಭಾನುವಾರ ದೇವಿಯ ತೇರು ಎಳೆಯುತ್ತಿರುವ ವೇಳೆ ತೇರಿನ ಮೇಲೆ ಹಾಗೂ ಮಾಲಾಧಾರಿಗಳ ಮೇಲೆ ಕಿಡಿಗೇಡಿಗಳು ಕಲ್ಲು ಎಸೆದಿದ್ದರು. ಮೂವರಿಗೆ ಕಲ್ಲು ಬಿದ್ದಿರುವ ಬಗ್ಗೆ ಆರೋಪ ಕೇಳಿಬಂದಿತ್ತು. ಕಲ್ಲು ಎಸೆದು ಕಿಡಿಗೇಡಿಗಳು ಪರಾರಿಯಾಗಿದ್ದರು. ಮಗು, ಯುವತಿ, ವಯಸ್ಕ ಮಹಿಳೆಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಿದ್ದರು. ಕಿಡಿಗೇಡಿಗಳನ್ನು ಬಂಧಿಸುವಂತೆ ಬಿಗಿಪಟ್ಟು ಹಿಡಿಯಲಾಗಿತ್ತು. ಘಟನೆ ಬಳಿಕ ಓಂ ಶಕ್ತಿ ಮಾಲಾಧಾರಿಗಳು ಜೆಜೆಆರ್ ನಗರ ಠಾಣೆಯ ಮುಂದೆ ಜಮಾಯಿಸಿ ಕ್ರಮಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದರು.
ಪ್ರಕರಣದ ಬಗ್ಗೆ ತನಿಖೆ ನಡೆಯುತ್ತಿದ್ದು, ಕಾನೂನು ಪ್ರಕಾರ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು. ಅವರು ಅಪ್ರಾಪ್ತರಾಗಿರುವುದರಿಂದ, ಜುವೆನೈಲ್ ನಿಯಮಗಳ ಅಡಿಯಲ್ಲಿ ಪ್ರಕರಣವನ್ನು ನಿರ್ವಹಿಸಲಾಗುವುದು. ಯಾರು ಈ ಬಾಲಕರನ್ನು ಪ್ರಚೋದಿಸಿದ್ದಾರೆ ಅಥವಾ ಘಟನೆ ಹೇಗೆ ನಡೆಯಿತು ಎಂಬುದರ ಕುರಿತು ಸಂಪೂರ್ಣ ತನಿಖೆ ನಡೆಸಲಾಗುವುದು ಎಂದು ಪರಮೇಶ್ವರ್ ಸ್ಪಷ್ಟಪಡಿಸಿದ್ದಾರೆ.
ಇಂತಹ ಘಟನೆಗಳು ನಡೆದಾಗ ಬಿಜೆಪಿ ರಾಜಕೀಯ ಮಾಡಲು ಪ್ರಯತ್ನಿಸುತ್ತದೆ ಎಂಬ ಆರೋಪವನ್ನು ಮಾಡಿರುವ ಪರಮೇಶ್ವರ್, ಬಿಜೆಪಿ ಹೇಳಿಕೆ ನೀಡುವ ಮೊದಲೇ ಕಾನೂನಿನ ಪ್ರಕಾರ ಕ್ರಮ ಕೈಗೊಳ್ಳಲಾಗಿದೆ. ಕಾನೂನು ತನ್ನದೇ ಆದ ರೀತಿಯಲ್ಲಿ ಕೆಲಸ ಮಾಡುತ್ತದೆ ಮತ್ತು ಯಾರ ಪ್ರಚೋದನೆಗೂ ಒಳಗಾಗುವುದಿಲ್ಲ ಎಂದು ಹೇಳಿದ್ದಾರೆ.
























