ಕೆಕೆಆರ್ ತಂಡದಿಂದ ಬಾಂಗ್ಲಾದ ಆಟಗಾರನನ್ನು ಕೈಬಿಟ್ಟದ್ದಕ್ಕೆ ಪ್ರತಿಕಾರದ ಕ್ರಮ
ಢಾಕಾ: ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಾಗುತ್ತಿರುವ ದಾಳಿಯನ್ನು ಖಂಡಿಸಿ ಇಂಡಿಯನ್ ಪ್ರೀಮಿಯರ್ ಲೀಗ್ನಿಂದ (ಐಪಿಎಲ್) ಬಾಂಗ್ಲಾದೇಶದ ಆಟಗಾರರನ್ನು ಕೈ ಬಿಡುವಂತೆ ಪ್ರತಿಭಟನೆಗಳು ನಡೆದಿದ್ದವು. ಇದಕ್ಕೆ ಮಣಿದು ಬಿಸಿಸಿಐ ಶಾರೂಕ್ ಖಾನ್ ಒಡೆತನದ ಕೆಕೆಆರ್ ತಂಡದಲ್ಲಿದ್ದ ಬಾಂಗ್ಲಾದ ಮುಸ್ತಫಿಝುರ್ ರೆಹಮಾನ್ ಅವರನ್ನು ಕೈ ಬಿಡುವಂತೆ ಸೂಚಿಸಿತ್ತು. ಕೊಲ್ಕತ್ತಾ ನೈಟ್ ರೈಡರ್ಸ್ ಫ್ರಾಂಚೈಸಿಯು ಮುಸ್ತಫಿಝುರ್ ರೆಹಮಾನ್ ಅವರನ್ನು ತಂಡದಿಂದ ಕೈ ಬಿಟ್ಟಿದೆ. ಇದರ ಬೆನ್ನಲ್ಲೇ ಬಾಂಗ್ಲಾದೇಶದಲ್ಲಿ ಐಪಿಎಲ್ ನಿಷೇಧಿಸಲು ಮುಂದಾಗಿದ್ದಾರೆ.
ಬಾಂಗ್ಲಾದೇಶದ ತಂಡದ ಆಟಗಾರ ಮುಸ್ತಫಿಝುರ್ ರೆಹಮಾನ್ನನ್ನು ಇಂಡಿಯನ್ ಪ್ರೀಮಿಯರ್ ಲೀಗ್ನಿಂದ ಕೈ ಬಿಟ್ಟ ಬೆನ್ನಲ್ಲೇ ಕೌಂಟರ್ ಅಟ್ಯಾಕ್ ನೀಡಲು ಬಾಂಗ್ಲಾದೇಶ ಸರ್ಕಾರ ಮುಂದಾಗಿದೆ. ಅದರ ಮೊದಲ ಹೆಜ್ಜೆಯಾಗಿ ಇದೀಗ ಬಾಂಗ್ಲಾದೇಶ್ದ ಲ್ಲಿ ಐಪಿಎಲ್ ಬ್ಯಾನ್ ಮಾಡಲು ಮುಂದಾಗುತ್ತಿದೆ.
ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಬಾಂಗ್ಲಾದ ಕ್ರೀಡಾ ಸಚಿವಾಲಯದ ಉಸ್ತುವಾರಿ ಸಚಿವ ಆಸಿಫ್ ನಜ್ರುಲ್, ಬಾಂಗ್ಲಾದೇಶ ಆಟಗಾರನಿಗೆ ಮಾಡಿದ ಅವಮಾನಕ್ಕೆ ಪ್ರತೀಕಾರವಾಗಿ ನಮ್ಮ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ ಪಂದ್ಯಗಳ ಪ್ರಸಾರವನ್ನು ನಿಲ್ಲಿಸುವಂತೆ ನಾನು ಮಾಹಿತಿ ಮತ್ತು ಪ್ರಸಾರ ಸಚಿವರನ್ನು ವಿನಂತಿಸಿದ್ದೇನೆ ಎಂದು ತಿಳಿಸಿದ್ದಾರೆ.
ಯಾವುದೇ ಸಂದರ್ಭದಲ್ಲೂ ಬಾಂಗ್ಲಾದೇಶ, ಬಾಂಗ್ಲಾದೇಶದ ಕ್ರಿಕೆಟ್ ಅಥವಾ ಬಾಂಗ್ಲಾದೇಶ ಕ್ರಿಕೆಟಿಗರ ಅವಮಾನವನ್ನು ನಾವು ಸಹಿಸುವುದಿಲ್ಲ. ಗುಲಾಮಗಿರಿಯ ದಿನಗಳು ಮುಗಿದಿವೆ. ಹೀಗಾಗಿ ನಮ್ಮ ದೇಶದಲ್ಲಿ ಇಂಡಿಯನ್ ಪ್ರೀಮಿಯರ್ ಲೀಗ್ನ ಪ್ರಸಾರ ನಿಷೇಧಿಸಲು ಮನವಿ ಸಲ್ಲಿಸಿರುವುದಾಗಿ ಆಸಿಫ್ ನಜ್ರುಲ್ ತಿಳಿಸಿದ್ದಾರೆ.
ಹೀಗಾಗಿ ಮುಂಬರುವ ಇಂಡಿಯನ್ ಪ್ರೀಮಿಯರ್ ಲೀಗ್ನ ಪಂದ್ಯಗಳು ಬಾಂಗ್ಲಾದೇಶದಲ್ಲಿ ಪ್ರಸಾರವಾಗುವ ಸಾಧ್ಯತೆಯಿಲ್ಲ. ಈಗಾಗಲೇ ಐಪಿಎಲ್ ಪಂದ್ಯಗಳಿಗೆ ಪಾಕಿಸ್ತಾನ ಸರ್ಕಾರ ನಿಷೇಧ ಹೇರಿದೆ. ಇತ್ತ ಬಾಂಗ್ಲಾದೇಶ ಕೂಡ ಪಾಕ್ ಮಾದರಿಯಲ್ಲೇ ಇಂಡಿಯನ್ ಪ್ರೀಮಿಯರ್ ಲೀಗ್ ಲೈವ್ ಪ್ರಸಾರಕ್ಕೆ ಬ್ರೇಕ್ ಹಾಕಲಿದೆ.
ಅಷ್ಟೇ ಅಲ್ಲದೆ ಭಾರತದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ನ ಬಾಂಗ್ಲಾದೇಶ ತಂಡದ ಪಂದ್ಯಗಳನ್ನು ಸ್ಥಳಾಂತರಿಸುವಂತೆ ಬಾಂಗ್ಲಾದೇಶ ಕ್ರಿಕೆಟ್ ಬೋರ್ಡ್ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಮನವಿ ಮಾಡಿದೆ. ಹೀಗಾಗಿ ಬಾಂಗ್ಲಾದೇಶ ತಂಡದ ಪಂದ್ಯಗಳಿಗೆ ಶ್ರೀಲಂಕಾ ಆತಿಥ್ಯವಹಿಸುವ ಸಾಧ್ಯತೆ ಇದೆ.
























