ಮದುವೆಯಾಗಲು ನಿರಾಕರಿಸಿದ ಮಹಿಳೆಯನ್ನು ಕೊಂದು ಪಲಾಯನ ಮಾಡಿದ್ದ ರಫೀಕ್
ಬೆಂಗಳೂರು : ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರದಲ್ಲಿ ಭಾರಿ ಪ್ರತಿಭಟನೆಗೆ ಕಾರಣವಾಗಿರುವ ಲವ್ ಜಿಹಾದ್ ಕೇಸ್ ದಿಢೀರ್ ಟ್ವಿಸ್ಟ್ ಪಡೆದುಕೊಂಡಿದೆ. ಲವ್ ಜಿಹಾದ್ ಮಾಡಿ ಹಿಂದು ಮಹಿಳೆಯ ಕೊಲೆ ಎಸಗಿದ ಆರೋಪಿಯೂ ಸಾವಿಗೆ ಶರಣಾಗಿದ್ದಾನೆ.
ಮದುವೆಗೆ ಒಪ್ಪದಿದ್ದಕ್ಕೆ ವಿಚ್ಛೇದಿತ ಮಹಿಳೆಯ ಬರ್ಬರ ಹತ್ಯೆ ಮಾಡಿದ್ದ ಆರೋಪಿ ರಫೀಕ್ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಶನಿವಾರ ರಂಜಿತಾ ಎಂಬಾಕೆಯನ್ನು ಕೊಲೆಗೈದು ಪರಾರಿಯಾಗಿ ಅರಣ್ಯದಲ್ಲಿ ಅಡಗಿದ್ದ ಆರೋಪಿ ರಫೀಕ್‌ನ(30) ಮೃತದೇಹ ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರದ ಕಾಳಮ್ಮನಗರ ಅರಣ್ಯದಲ್ಲಿ ಪತ್ತೆಯಾಗಿದೆ. ಎಸ್ಕೇಪ್ ಆಗಿದ್ದ ಆರೋಪಿಗಾಗಿ ಇಂದು ಶ್ವಾನದಳದಿಂದ ಹುಡುಕಾಟ ನಡೆಸುವಾಗ ಘಟನೆ ಬೆಳಕಿಗೆ ಬಂದಿದೆ.
ಹತ್ತು ವರ್ಷಗಳ ಹಿಂದೆ ಗಂಡಿನಿಂದ ವಿಚ್ಛೇದನ ಪಡೆದಿದ್ದ ರಂಜಿತಾಳನ್ನು ರಫೀಕ್ ಪ್ರೀತಿಸುತ್ತಿದ್ದ. ಇಬ್ಬರ ಕುಟುಂಬಗಳ ನಡುವೆ ಒಳ್ಳೆಯ ಬಾಂಧವ್ಯ ಇದ್ದು, ರಫೀಕ್ ಆಗಾಗ ರಂಜಿತಾಳ ಮನೆಗೆ ಬಂದು ಊಟ ಮಾಡಿ ಹೋಗುತ್ತಿದ್ದ. ಒಂದು ಮಗು ಕೂಡ ಹೊಂದಿದ್ದ ರಂಜಿತಾ ತಂದೆ-ತಾಯಿ ಹಾಗೂ ಅಣ್ಣನೊಂದಿಗೆ ಯಲ್ಲಾಪುರದಲ್ಲಿ ವಾಸವಾಗಿದ್ದಳು. ಜೀವನೋಪಾಯಕ್ಕಾಗಿ ಸರ್ಕಾರಿ ಶಾಲೆಯೊಂದರಲ್ಲಿ ಬಿಸಿಯೂಟ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗೆ ಮದುವೆಯಾಗುವಂತೆ ರಂಜಿತಾಳನ್ನು ರಫೀಕ್ ಒತ್ತಾಯಿಸಿದ್ದ. ಆದರೆ ಇದಕ್ಕೆ ರಂಜಿತಾ ವಿರೋಧ ವ್ಯಕ್ತಪಡಿಸಿದ್ದಳು. ನಮ್ಮ ಸಂಬಂಧ ಹೀಗೆ ಇರಲಿ, ಮದುವೆ ಆಗುವುದಿಲ್ಲ ಎಂದು ಹೇಳಿದ್ದಳು ಎನ್ನಲಾಗಿದೆ.
ಇದರಿಂದ ಕೋಪಗೊಂಡಿದ್ದ ರಫೀಕ್ ಎಂದಿನಂತೆ ರಂಜಿತಾ ಶಾಲೆಯಿಂದ ಮನೆಗೆ ಹಿಂತಿರುಗುತ್ತಿದ್ದ ವೇಳೆ ರಸ್ತೆ ಮಧ್ಯೆ ಆಕೆಯನ್ನು ಅಡ್ಡಗಟ್ಟಿ, ಮತ್ತೆ ಮದುವೆ ಪ್ರಸ್ತಾಪ ಮಾಡಿದ್ದ. ಆದರೆ ಆ ವೇಳೆಯೂ ರಂಜಿತಾ ನಿರಾಕರಿಸಿದ ಕಾರಣ ಆಕೆಗೆ ಚಾಕುವಿನಿಂದ ಇರಿದು ಎಸ್ಕೇಪ್ ಆಗಿದ್ದ. ಆರೋಪಿ ರಫೀಕ್ ಮತ್ತು ಮೃತ ರಂಜಿತಾಳ ಅಣ್ಣ ಸ್ನೇಹಿತರಾಗಿದ್ದು, ಘಟನೆ ನಡೆಯುವ ಮುನ್ನ ರಾತ್ರಿ ಇಬ್ಬರು ಪಾರ್ಟಿ ಕೂಡ ಮಾಡಿದ್ದರು ಎಂಬುದು ಪೊಲೀಸ್ ತನಿಖೆ ವೇಳೆ ಬಯಲಾಗಿತ್ತು.
ಹಿಂದೂ ಯುವತಿಯನ್ನು ಬರ್ಬರವಾಗಿ ಕೊಲೆ ಮಾಡಿರುವುದನ್ನು ಖಂಡಿಸಿ ಇಂದು ಯಲ್ಲಾಪುರ ಬಂದ್ಗೆ ವಿಎಚ್ಪಿ ಕರೆ ಕೊಟ್ಟಿತ್ತು. ಅಂಗಡಿಮುಂಗಟ್ಟು ಮುಚ್ಚಿ ಬಂದ್ಗೆ ಸ್ಪಂದಿಸುವಂತೆ ಮನವಿ ಮಾಡಿತ್ತು. ಪಟ್ಟಣದ ಬಸವೇಶ್ವರ ಸರ್ಕಲ್ನಲ್ಲಿ ಪ್ರತಿಭಟನೆಗೆ ಸಿದ್ಧತೆ ನಡೆದಿತ್ತು. ಆರೋಪಿ ಬಂಧಿಸೋವರೆಗೂ ರಂಜಿತಾಳ ಅಂತ್ಯಕ್ರಿಯೆ ಮಾಡುವುದಿಲ್ಲ ಎಂದು ಹಿಂದೂ ಸಂಘಟನೆಗಳು ಪಟ್ಟು ಹಿಡಿದಿದ್ದವು. ಈ ನಡುವೆ ರಫೀಕ್ ಆತ್ಮಹತ್ಯೆಗೆ ಶರಣಾಗಿರುವ ವಿಚಾರ ಬೆಳಕಿಗೆ ಬಂದಿದೆ.
























