ಪಾರ್ಕಿಂಗ್ ಪ್ರದೇಶದಲ್ಲಿ ಸಂಭವಿಸಿದ ಅವಘಡದಲ್ಲಿ 500ಕ್ಕೂ ಅಧಿಕ ಬೈಕ್ಗಳು ಭಸ್ಮ
ತ್ರಿಶ್ಶೂರ್ : ತ್ರಿಶ್ಶೂರ್ ರೈಲು ನಿಲ್ದಾಣದಲ್ಲಿ ಭಾನುವಾರ ಬೆಳಗ್ಗೆ ಸಂಭವಿಸಿದ ಭೀಕರ ಅಗ್ನಿ ಅವಘಡದಲ್ಲಿ ನೂರಾರು ಬೈಕ್ಗಳು ಸುಟ್ಟು ಕರಕಲಾಗಿವೆ. ಬೈಕ್ ಪಾರ್ಕಿಂಗ್ ಪ್ರದೇಶದಲ್ಲಿ ಬೆಂಕಿ ಅನಾಹುತ ಸಂಭಿಸಿದ್ದು, 2ನೇ ಪ್ಲಾಟ್ಫಾರ್ಮ್ ತನಕ ವ್ಯಾಪಿಸಿದೆ. ನಿಲ್ಲಿಸಲಾಗಿದ್ದ ನೂರಾರು ಬೈಕ್ಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಘಟನೆ ಬೆಳಗ್ಗೆ ಸುಮಾರು 6.15ರ ವೇಳೆಗೆ ನಡೆದಿದೆ ಎಂದು ವರದಿಯಾಗಿದೆ.
ರೈಲು ನಿಲ್ದಾಣದ ಎರಡನೇ ಗೇಟ್ ಸಮೀಪ ಇರುವ ಬೈಕ್ ಪಾರ್ಕಿಂಗ್ ಸ್ಥಳದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆರಂಭದಲ್ಲಿ ಒಂದು ಬೈಕ್ನಲ್ಲಿ ಕಾಣಿಸಿಕೊಂಡ ಬೆಂಕಿ ಕ್ಷಿಪ್ರವಾಗಿ ಇತರ ಬೈಕ್ಗಳಿಗೆ ಹರಡಿದ್ದು, ಕೆಲವೇ ನಿಮಿಷಗಳಲ್ಲಿ ಪರಿಸ್ಥಿತಿ ಗಂಭೀರಗೊಂಡಿದೆ. ಪಾರ್ಕಿಂಗ್ನಲ್ಲಿ ಸುಮಾರು 500 ಬೈಕ್ಗಳು ನಿಂತಿದ್ದವು, ಅವೆಲ್ಲವೂ ಬೆಂಕಿಗೆ ಆಹುತಿಯಾಗಿವೆ. ನಿತ್ಯ ಇಲ್ಲಿ 500ಕ್ಕೂ ಅಧಿಕ ದ್ವಿಚಕ್ರ ವಾಹನಗಳು ನಿಂತಿರುತ್ತವೆ.
ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಮೂರು ಘಟಕಗಳು ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿವೆ. ಅಗ್ನಿಶಾಮಕ ಸಿಬ್ಬಂದಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಶ್ರಮಿಸುತ್ತಿದ್ದು, ಶೆಡ್ಗೆ ತೀವ್ರ ಹಾನಿಯಾಗಿದೆ. ಪಾರ್ಕಿಂಗ್ ಶೆಡ್ ಬೀಳುವ ಹಂತದಲ್ಲಿದ್ದು, ಭದ್ರತಾ ದೃಷ್ಟಿಯಿಂದ ಸುತ್ತಮುತ್ತಲ ಪ್ರದೇಶವನ್ನು ತೆರವುಗೊಳಿಸಲಾಗಿದೆ. ಎಲ್ಲ ವಾಹನಗಳಲ್ಲಿ ಪರಟ್ರೋಲು ಇದ್ದ ಕಾರಣ ಬೆಂಕಿಯ ತೀವ್ರತೆ ಹೆಚ್ಚಾಗಿದೆ.
ಬೆಂಕಿಯ ತಾಪದಿಂದ ಹತ್ತಿರದ ಮರಕ್ಕೂ ಬೆಂಕಿ ತಗುಲಿದ್ದು, ಮರದ ಒಂದು ದೊಡ್ಡ ಕೊಂಬೆ ಮುರಿದು ಕೆಳಗೆ ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ಬೆಂಕಿ ಅವಘಡಕ್ಕೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಘಟನೆ ಕುರಿತು ತನಿಖೆ ನಡೆಯುತ್ತಿದ್ದು, ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.
























