ರಾತ್ರಿ ಭದ್ರತಾ ಸಿಬ್ಬಂದಿ ಕಣ್ಣು ತಪ್ಪಿಸಿ ಗೋಪುರ ಏರಿದ ಕುಡುಕ
ತಿರುಪತಿ : ಕುಡುಕನೊಬ್ಬ ತಿರುಪತಿ ದೇಗುಲದ ಕಂಪೌಂಡ್ ಹಾರಿ ದೇಗುಲದ ಆವರಣ ಪ್ರವೇಶಿಸಿ ಗೋಪುರ ಏರಿ ಅವಾಂತರ ಸೃಷ್ಟಿಸಿದ ಆಘಾತಕಾರಿ ಘಟನೆಯೊಂದು ಸಂಭವಿಸಿದೆ. ತಿರುಪತಿಯ ಗೋವಿಂದರಾಜ ಸ್ವಾಮಿ ದೇವಸ್ಥಾನದಲ್ಲಿ ಶುಕ್ರವಾರ ರಾತ್ರಿ ಈ ಘಟನೆ ಸಂಭವಿಸಿದೆ. ದೇಗುಲದಲ್ಲಿ ‘ಏಕಾಂತ ಸೇವೆ’ ಮುಗಿದ ಸಂದರ್ಭದಲ್ಲಿ ಆಗಂತುಕ ಭದ್ರತಾ ಪಡೆಗಳ ಕಣ್ಣು ತಪ್ಪಿಸಿ ಕಂಪೌಂಡ್ ಹಾರಿ ಒಳಬಂದು ಏಕಾಏಕಿ ಗೋಪುರ ಏರಿ ಅಲ್ಲಿದ್ದ ಕಳಶಗಳನ್ನು ಎಳೆಯಲು ಯತ್ನಿಸಿದ್ದಾನೆ. ಇದು ದೇಗುಲದ ಸಿಬ್ಬಂದಿ ಮತ್ತು ಭಕ್ತರಲ್ಲಿ ಭಯ ಹುಟ್ಟಿಸಿತು. ನಂತರ ಆರೋಪಿಯನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದರು.
ಆರೋಪಿಯನ್ನು ನಿಜಾಮಾಬಾದ್ ಜಿಲ್ಲೆಯ ಕೂರ್ಮಾವಾಡಾದ ಪೆದ್ದಮಲ್ಲ ರೆಡ್ಡಿ ಕಾಲೋನಿಯ ನಿವಾಸಿ ತಿರುಪತಿ ಎಂದು ಗುರುತಿಸಲಾಗಿದೆ. ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಸುಮಾರು 3 ಗಂಟೆಗಳ ಕಾಲ ಶ್ರಮಿಸಿ ಆತನನ್ನು ಗೋಪುರದಿಂದ ಸುರಕ್ಷಿತವಾಗಿ ಕೆಳಗೆ ಇಳಿಸಿದರು.
ಮದ್ಯದ ಅಮಲಿನಲ್ಲಿ ದೇಗುಲದ ಗೋಪುರವನ್ನು ಏರಿದ ವ್ಯಕ್ತಿ ಕೆಳಗಿಳಿಯಲು ನಿರಾಕರಿಸಿದ್ದಾನೆ. ಅಲ್ಲದೆ ಪೊಲೀಸರು ತನಗೆ ಮದ್ಯದ ಬಾಟಲ್ ನೀಡಬೇಕೆಂದು ಒತ್ತಾಯಿಸಿದ್ದಾನೆ. ತಿರುಪತಿ ಪೂರ್ವ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಸುಮಾರು ಮೂರು ಗಂಟೆಗಳ ಕಾಲ ಆತನನ್ನು ಕೆಳಗೆ ಇಳಿಸಲು ಶ್ರಮಿಸಿದರು. ಅಪಾಯಕಾರಿ ಪರಿಸ್ಥಿತಿಯ ಚಾಣಾಕ್ಷತೆಯಿಂದ ಕಾರ್ಯನಿರ್ವಹಿಸಿದ ಪೊಲೀಸರು ಮತ್ತು ಅಗ್ನಿಶಾಮಕ ಸಿಬ್ಬಂದಿ ಕಬ್ಬಿಣದ ಏಣಿಗಳನ್ನು ಬಳಸಿ ಹಗ್ಗಗಳ ಸಹಾಯದಿಂದ ಆತನನ್ನು ಗೋಪುರದ ಮೇಲಿನಿಂದ ಕೆಳಕ್ಕೆ ಕರೆತಂದರು. ನಂತರ ಆತನನ್ನು ವಶಕ್ಕೆ ಪಡೆಯಲಾಯಿತು.
ಘಟನೆ ಬಗ್ಗೆ ವಿವರವಾದ ತನಿಖೆ ನಡೆಯುತ್ತಿದೆ. ತನಿಖೆ ಪೂರ್ಣಗೊಂಡ ನಂತರ ಘಟನೆಗೆ ಸಂಬಂಧಿಸಿದ ಎಲ್ಲಾ ಮಾಹಿತಿ ನೀಡುತ್ತೇವೆ ಎಂದು ಪೂರ್ವ ಡಿಎಸ್ಪಿ ಭಕ್ತವತ್ಸಲಂ ತಿಳಿಸಿದ್ದಾರೆ.
























